Friday, April 19, 2024
Homeಕರಾವಳಿಮಂಗಳೂರಿನಲ್ಲಿ ಪೊಲೀಸರೇ ಕಳ್ಳರು: ಐಷಾರಾಮಿ ಕಾರು ನಾಪತ್ತೆ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ವರದಿ...

ಮಂಗಳೂರಿನಲ್ಲಿ ಪೊಲೀಸರೇ ಕಳ್ಳರು: ಐಷಾರಾಮಿ ಕಾರು ನಾಪತ್ತೆ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ವರದಿ ಸಲ್ಲಿಕೆ

spot_img
- Advertisement -
- Advertisement -

ಮಂಗಳೂರು: ಎಲಿಯ ಕನ್‌ಸ್ಟ್ರಕ್ಷನ್‌ ಕಂಪನಿಯ ಅವ್ಯವಹಾರ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಮೂರು ಕಾರುಗಳ ಪೈಕಿ ಜಾಗ್ವಾರ್‌ ಕಾರನ್ನು ಪೊಲೀಸರೇ ಮಾರಾಟ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ಜನರಿಗೆ ಹಣ ದ್ವಿಗುಣ ಮಾಡಿಕೊಡುವ ಆಮಿಷವೊಡ್ಡಿ 30 ಕೋಟಿ ರೂಪಾಯಿ ವಂಚಿಸಿದ್ದ ಎಲಿಯ ಕನ್​ಸ್ಟ್ರಕ್ಷನ್ ಆಯಂಡ್ ಬಿಲ್ಡರ್ ಪ್ರೈ.ಲಿ ಸಂಸ್ಥೆ ವಿರುದ್ಧ ಕೇಸ್​ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಸಿಬಿ ಪೊಲೀಸರು, ವಂಚನೆ ಬಂಧಿತರಾಗಿದ್ದ ಮೂವರು ಆರೋಪಿಗಳಿಂದ ಜಾಗ್ವಾರ್, ಬಿಎಂಡಬ್ಲ್ಯು, ಪೋರ್ಷೆ ಸೇರಿ ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು.

ತಮ್ಮ ವಶದಲ್ಲಿದ್ದ ಜಾಗ್ವಾರ್ ಕಾರನ್ನು ಮಂಗಳೂರಿನ ಸಿಸಿಬಿ ಅಧಿಕಾರಿಗಳು ಮಾರಾಟ ಮಾಡಿದ್ದಾರೆ. ಪೋರ್ಷೆ ಹಾಗು ಬಿಎಂಡಬ್ಲ್ಯು ಕಾರನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಡಿಸಿಪಿ ವಿನಯ್‌ ಗಾಂವ್ಕರ್‌ ಅವರು ಡಿಜಿಪಿಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದಿನ ಪೊಲೀಸ್ ಕಮೀಷನರ್ ಆಗಿದ್ದ ವಿಕಾಸ್ ಕುಮಾರ್ ಅವರ ಅವಧಿಯಲ್ಲಿ ಆ ಸಂದರ್ಭದ ಸಿಸಿಬಿ ಪೊಲೀಸರು ಈ ವಂಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಸಿಸಿಬಿ ಹಿಂದಿನ ಪಿಎಸ್​ಐ ಕಬ್ಬಾಳ್ ರಾಜ್, ಇಕೊನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಇನ್ಸ್​ಪೆಕ್ಟರ್ ರಾಮಕೃಷ್ಣ, ಸಿಸಿಬಿ ಸಿಬ್ಬಂದಿ ಆಶೀತ್ ಡಿಸೋಜಾ ಮತ್ತು ರಾಜಾ ವಿರುದ್ಧ ಮಂಗಳೂರು ನೂತನ ಕಮೀಷನರ್ ಶಶಿಕುಮಾರ್ ಆದೇಶದ ಮೇರೆಗೆ ಡಿ.ಸಿ.ಪಿ ವರದಿ ಸಲ್ಲಿಸಿದ್ದಾರೆ.

ಡಿಐಜಿ ಅವರು ಸಿಸಿಬಿ ವಿರುದ್ಧ ಸಮಗ್ರ ತನಿಖೆಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸ್ ತಂಡ ಎಸ್ಪಿ ರೋಹಿಣಿ ಕಟ್ಟೋಚ್ ನೇತೃತ್ವದಲ್ಲಿ ಶೀಘ್ರವೇ ಮಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ಸಿಐಡಿ ಇನ್‌ಸ್ಪೆಕ್ಟರ್ ಚಂದ್ರಪ್ಪ ಸೇರಿದಂತೆ ತಂಡ ಈ ತನಿಖೆ ನಡೆಸಲು ಒಂದೆರಡು ದಿನದಲ್ಲಿ ಮಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ಮೇಲ್ನೋಟಕ್ಕೆ ತಪ್ಪು ಕಂಡು ಬಂದಿರುವ ಎಸ್‌ಐವೊಬ್ಬರು ವರ್ಗಾವಣೆಗೊಂಡು ಬೇರೆ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಉಳಿದವರು ಮಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿರುವುದರಿಂದ ಸಿಐಡಿ ತಂಡ ಇಲ್ಲಿಗೇ ಆಗಮಿಸಿ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಇದೇನು ಹಣ ಡಬಲ್ ಮಾಡುವ ದಂಧೆ?
ಮಂಗಳೂರಿನಲ್ಲಿ ಮತ್ತು ಕಡಬ ತಾಲೂಕಿನ ಶಿರಾಡಿ ಗ್ರಾಮದ ಉದನೆ ಎಂಬ ಪೇಟೆಯಲ್ಲಿ ಎಲಿಯಾ ಕನ್ ಸ್ಟ್ರಕ್ಷನ್ ಮತ್ತು ಬಿಲ್ಡರ್ಸ್ ಎನ್ನುವ ಹೆಸರಿನ ಸಂಸ್ಥೆ ಯನ್ನು ತೆರೆದು ಜನರಿಗೆ ಹಣ ದ್ವಿಗುಣ ಮಾಡಿಕೊಡುವ ಆಮಿಷ ಒಡ್ಡಿ 30 ಕೋಟಿ ರೂಪಾಯಿ ವಂಚಿಸಿದ್ದರು. ಒಂದು ಲಕ್ಷ ನೀಡಿದಲ್ಲಿ 28 ದಿನಗಳ ಬಳಿಕ ಎರಡು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿ ಮುಗ್ದ ಜನರಿಂದ ಕೋಟ್ಯಂತರ ರೂ ಠೇವಣಿ ಹಾಕಿಸಿ ಪಂಗನಾಮ ಹಾಕಿತ್ತು. ಈ ಬಗ್ಗೆ ಮಂಗಳೂರಿನ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಎಲಿಯ ಕನ್ ಸ್ಟ್ರಕ್ಷನ್ ಆಯಂಡ್ ಬಿಲ್ಡರ್ ಪ್ರೈ.ಲಿ ಸಂಸ್ಥೆ ವಿರುದ್ದ ಪಾಂಡೇಶ್ವರದಲ್ಲಿನ ಇಕೊನಾಮಿಕ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂದ ಕೇರಳ ಮೂಲದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ಸಂದರ್ಭದಲ್ಲಿ ಜಾಗ್ವಾರ್, ಬಿಎಂಡಬ್ಲ್ಯು, ಪೋರ್ಷೆ ಸೇರಿ ಮೂರು ಐಷಾರಾಮಿ ಕಾರುಗಳನ್ನು ಆರೋಪಿಗಳಿಂದ ವಶಕ್ಕೆ ಪಡೆದಿದ್ದರು.

- Advertisement -
spot_img

Latest News

error: Content is protected !!