ಸುಬ್ರಹ್ಮಣ್ಯ: ಸಕಲೇಶಪುರ- ಬಲ್ಲುಪೇಟೆ ನಡುವಿನ ಮಂಗಳೂರು -ಬೆಂಗಳೂರುರೈಲು ಮಾರ್ಗದ ಸಕಲೇಶಪುರ ಸಮೀಪದ ಆಚಂಗಿ ವ್ಯಾಪ್ತಿಯಲ್ಲಿ ರೈಲು ಮಾರ್ಗಕ್ಕೆ ಗುಡ್ಡ ಕುಸಿದು ರೈಲು ಸಂಚಾರ ಸ್ಥಗಿತಗೊಂಡಿದೆ. ರವಿವಾರವೂ ಮಣ್ಣು ತೆರವು ಕಾರ್ಯ ಮುಂದುವರಿಯಿತು.
ಈ ಮಾರ್ಗದಲ್ಲಿ ಸಂಚರಿಸಬೇಕಾಗಿದ್ದ ಎಲ್ಲ ರೈಲುಗಳನ್ನು ಆ.10ರ ಮುಂಜಾನೆ ವೇಳೆ ಗುಡ್ಡ ಕುಸಿದ ಕಾರಣ ಸ್ಥಗಿತ ಮಾಡಿ ಮಣ್ಣು ತೆರವು ಕಾರ್ಯ ಕಾಮಗಾರಿ ಆರಂಭಿಸಲಾಗಿದೆ.
ಕಾಮಗಾರಿ ನಡೆಯುತ್ತಿದ್ದ ವೇಳೆ ಶನಿವಾರದಂದು ಮತ್ತೆ ಮಣ್ಣು ಕುಸಿದಿದ್ದು, ಅದರಡಿಯಲ್ಲಿ ಹಿಟಾಚಿ ಸಿಲುಕಿಕೊಂಡಿತ್ತು. ಅದೃಷ್ಟವಶಾತ್ ಹಿಟಾಚಿಯಲ್ಲಿದ್ದವರು ಪಾರಾಗಿದ್ದಾರೆ. ಇದೀಗ ಬಹುತೇಕ ಅಂತಿಮ ಹಂತಕ್ಕೆ ಮಣ್ಣು ತೆರವು ಕಾರ್ಯ ತಲುಪಿದೆ. ಆದರೆ ಎರಡೂ ಭಾಗದಿಂದ ಮತ್ತೆ ಮಣ್ಣು ಕುಸಿಯುವ ಭೀತಿ ಎದುರಾಗಿದೆ.
ರೈಲು ಸಂಚಾರವನ್ನು ಮಣ್ಣು ತೆರವು ಮುಗಿದು, ಹಳಿ ದುರಸ್ತಿಪಡಿಸಿ, ಸಂಚಾರಕ್ಕೆ ಯೋಗ್ಯವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡು ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೆರಡು ದಿನಗಳ ಕಾಲ ರೈಲು ಸಂಚಾರ ಸ್ಥಗಿತವಾಗಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಇನ್ನು ಮತ್ತೆ ಗುಡ್ಡವು ಈಗ ಮಣ್ಣು ತೆರವು ಮಾಡುತ್ತಿರುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕುಸಿತಗೊಂಡಿದ್ದು, ಇದರಿಂದ ದುರಸ್ತಿ ಕಾರ್ಯ ವಿಳಂಬವಾಗುತ್ತಿದೆ. ಬೃಹತ್ ಗಾತ್ರದ ಬಂಡೆಗಳೂ ಹಳಿಗೆ ಬಿದ್ದಿದ್ದು, ಅವುಗಳನ್ನು ತಂಡು ಮಾಡಿ ಸಾಗಿಸಬೇಕಾಗಿದೆ. ಹಳಿಯಲ್ಲೇ ಬಂಡೆಯನ್ನು ಕತ್ತರಿಸುವ ಕೆಲಸ ಕಠಿನವಾಗಿದೆ ಎನ್ನಲಾಗಿದೆ. ಭೂಕುಸಿತ ಸಹಿತ ಕೆಲವು ಕಾರಣಗಳಿಂದ ಎರಡು ವಾರಗಳಿಂದ ಸಮರ್ಪಕ ರೈಲು ಸೇವೆ ಇಲ್ಲದ ಕಾರಣ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.


