ಮಂಗಳೂರು: ತಾಲೂಕಿನ ಬದ್ರಿಯಾನಗರದಲ್ಲಿ ಮಂಗಳವಾರದಂದು (ಮೇ.25) ಮಾಸ್ಕ್ ಧರಿಸದೇ ಕ್ರಿಕೆಟ್ ಆಡುತ್ತಿದ್ದವರನ್ನು ಪ್ರಶ್ನಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೋರ್ವರ ಮೇಲೆ ಪುಂಡರು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪರಂಗಿಪೇಟೆಯ ಮಹಮ್ಮದ್ ಇದಾಯತುಲ್ಲಾ(25), ಅಹ್ಮದ್ ಬಶೀರ್(30), ಕುತ್ತಾರ್‌ನ ಅಬೂಬಕರ್ ಸಿದ್ದಿಕ್(26) ಹಾಗೂ ಪರಂಗಿಪೇಟೆ ಪುದುವಿನ ಅಬ್ದುಲ್ ಸಿದ್ದಿಕ್(33) ಬಂಧಿತರು. ಇವರಲ್ಲಿ ಇದಾಯತುಲ್ಲಾ ಹಾಗೂ ಬಶೀರ್ ವಿರುದ್ಧ ವಿವಿಧ ಪ್ರಕರಣಗಳು ಹಿಂದೆಯೂ ದಾಖಲಾಗಿವೆ. ತಲೆಮರೆಸಿಕೊಂಡ ಆರೋಪಿಗಳನ್ನು ಇಂದು ಬೆಳಿಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಮನ್ಸೂರ್ ಆಲಿ ಎಂಬನನ್ನು ಬಂಧಿಸಬೇಕಾಗಿದೆ.
ಏನಿದು ಪ್ರಕರಣ?
ಮೇ 25 ರಂದು ಮಲ್ಲೂರು ಗ್ರಾಮ ಪಂಚಾಯತ್ ಪಿಡಿಒ ರಾಜೇಂದ್ರ ಶೆಟ್ಟಿ ಅವರ ಮೇಲೆ ಹಲ್ಲೆ ನಡೆದಿದೆ. ಬದ್ರಿಯಾನಗರ ಮೈದಾನದಲ್ಲಿ ಮಾಸ್ಕ್ ಹಾಕದೆ ಆಟವಾಡುತ್ತಿದ್ದವರನ್ನು ಗಮನಿಸಿದ ಪಿಡಿಒ ರಾಜೇಂದ್ರ ಶೆಟ್ಟಿ ಮಾಸ್ಕ್ ಧರಿಸದಿದ್ದನ್ನು ಪ್ರಶ್ನಿಸಿದ್ದಾರೆ. ಯುವಕರಿಗೆ ಮಾಸ್ಕ್ ಹಾಕುವಂತೆ ಸೂಚಿಸಿದ್ದಾರೆ. ಮಾಸ್ಕ್ ಹಾಕದೇ ಗುಂಪು ಸೇರಿದ್ದನ್ನು ಪ್ರಶ್ನಿಸಿ ತಮ್ಮ ಮೊಬೈಲ್ನಲ್ಲಿ ಫೋಟೋ ತೆಗೆಯಲು ಮುಂದಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕ್ರಿಕೆಟ್ ಆಡುತ್ತಿದ್ದವರು ಪಿಡಿಒ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಗ್ರಾ.ಪಂ ಕಚೇರಿ ಸಿಬ್ಬಂದಿ, ಅಧ್ಯಕ್ಷರು ಸ್ಥಳಕ್ಕೆ ಆಗಮಿಸಿದಾಗ ಆರೋಪಿಗಳು KA 19 MJ 9737 ಮತ್ತು ಸ್ಕೂಟರ್ KA 19 EW 6783 ರಲ್ಲಿ ಸ್ಥಳದಿಂದ ಪರಾರಿಯಾಗಿದ್ದರು.


