ಬೆಳ್ತಂಗಡಿ: ಇಲ್ಲಿನ ಗಂಡಿಬಾಗಿಲು ಸಮೀಪ ಕುಡಿದ ಮತ್ತಿನಲ್ಲಿ ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ.

ನೆರಿಯಾ ಗಂಡಿಬಾಗಿಲು ನಿವಾಸಿ ಸೌಮ್ಯ ಫ್ರಾನ್ಸಿಸ್ (40) ಕೊಲೆಯಾದ ಮಹಿಳೆ. ಈಕೆಯ ಪತಿ ಜಾನ್ಸನ್(47) ಕೊಲೆಗೈದ ಆರೋಪಿ. ಇವರು ಕೇರಳ ಮೂಲದವರಾಗಿದ್ದು ಗಂಡಿ ಬಾಗಿಲು ಸಮೀಪ ಜಾಗ ಹೊಂದಿದ್ದರು. ಇಬ್ಬರೂ ರಬ್ಬರ್ ಟ್ಯಾಪಿಂಗ್ ಮಾಡಿ ಜೀವನ ನಡೆಸುತ್ತಿದ್ದರು. ಪ್ರತಿನಿತ್ಯ ಇಬ್ಬರಿಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ನಿನ್ನೆ ರಾತ್ರಿ ಕೂಡ ಇದೇ ರೀತಿ ಗಲಾಟೆ ನಡೆದಿದೆ. ಈ ವೇಳೆ ಜಾನ್ಸನ್ ಮರದ ತುಂಡಿನಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದ್ದು, ಕೂಡಲೇ ಆಕೆಯನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುತ್ತಿರುವಾಗ ಆಕೆ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಮೃತ ಮಹಿಳೆಯ ಸಹೋದರ ಸನೋಜ್ ಫ್ರಾನ್ಸಿಸ್ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.