
ಬಂಟ್ವಾಳ: ಅಂಗಡಿಯ ಮುಂಭಾಗದಲ್ಲಿ ಶೆಡ್ ನಿರ್ಮಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ 58 ವರ್ಷದ ವ್ಯಕ್ತಿಯೊಬ್ಬರು ದುರ್ಮರಣಕ್ಕೀಡಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೇರಮಜಲ್ ಗ್ರಾಮದಲ್ಲಿ ನಡೆದಿದೆ.
ಮೇರಮಜಲ್ ನಿವಾಸಿ ಎ. ಇಸ್ಮಾಯಿಲ್ (58) ಮೃತಪಟ್ಟ ದುರ್ದೈವಿ.
ಘಟನೆಯ ವಿವರ: ಜೂನ್ 28 ರಂದು ಸಂಜೆ ಇಸ್ಮಾಯಿಲ್ ಅವರು ತಮ್ಮ ಅಂಗಡಿಯ ಮುಂದೆ ಶೆಡ್ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದರು. ನೆಲಕ್ಕೆ ಎರಡು ಕಬ್ಬಿಣದ ಪೈಪ್‌ಗಳನ್ನು ಅಳವಡಿಸಿದ ನಂತರ, ಮೂರನೇ ಪೈಪ್‌ನೊಳಗೆ ಸಿಲುಕಿಕೊಂಡಿದ್ದ ಮರಳನ್ನು ಸುರಿಯಲು ಯತ್ನಿಸಿದ್ದಾರೆ. ಇದಕ್ಕಾಗಿ ಅವರು ಸುಮಾರು 20 ಅಡಿ ಉದ್ದದ ಕಬ್ಬಿಣದ ಪೈಪ್ ಅನ್ನು ಮೇಲಕ್ಕೆತ್ತಿದಾಗ, ಅದು ಆಕಸ್ಮಿಕವಾಗಿ ಅಂಗಡಿಯ ಮುಂದೆಯೇ ಹಾದುಹೋಗಿದ್ದ ಹೈ-ವೋಲ್ಟೇಜ್ ವಿದ್ಯುತ್ ತಂತಿಗೆ ತಗುಲಿದೆ.
ಪೈಪ್ ಮುಖಾಂತರ ತೀವ್ರವಾಗಿ ವಿದ್ಯುತ್ ಪ್ರವಹಿಸಿದ್ದರಿಂದ ಇಸ್ಮಾಯಿಲ್ ಅವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ನೆಲಕ್ಕೆ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಈ ಕುರಿತು ಮೃತರ ಪುತ್ರ ಮೊಹಮ್ಮದ್ ಸಫಾನ್ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


