ಮಂಗಳೂರು: ಮಿಸ್ಬಾ ಶಿಕ್ಷಣ ಸಂಸ್ಥೆಗಳ ಚೇರ್ಮನ್, ಮಾಜಿ ಶಾಸಕ ಮೊದಿನ್ ಬಾವಾ ಅವರ ಸಹೋದರ ಬಿ. ಎಂ. ಮಮ್ತಾಜ್ ಅಲಿ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ದಂಪತಿ ಸಹಿತ ಎಲ್ಲ ಆರು ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರೆದಿದೆ.
ಈ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವವರು, ಸುರತ್ಕಲ್ ಕೃಷ್ಣಾಪುರ ನಿವಾಸಿ ರೆಹಮತ್ ಮತ್ತು ಆಕೆಯ ಪತಿ ಶೋಯಬ್, ಇತರ ಆರೋಪಿಗಳಾದ ಮೊಹಮ್ಮದ್ ಸಿರಾಜ್ ಸಲಾಂ, ಕಾಟಿಪಳ್ಳ ಬೊಳ್ಳಾಜೆಯ ಅಬ್ದುಲ್ ಸತ್ತಾರ್, ಬಂಟ್ವಾಳ ಸಜಿಪ ಮುನ್ನೂರು ನಂದಾವರದ ಕಲಂದರ್ ಶಾ ಹಾಗೂ ಕೃಷ್ಣಾಪುರ 7ನೇ ಬ್ಲಾಕ್‌ನ ಮೊಹಮ್ಮದ್ ಮುಸ್ತಫಾ.
ಬಿ. ಎಂ. ಮಮ್ತಾಜ್ ಅಲಿ ಅವರನ್ನು ಬ್ಲ್ಯಾಕ್‌ಮೇಲ್ ಹಾಗೂ ಸುಲಿಗೆ ಮಾಡಿದ ಆರೋಪಿಗಳು ಮಮ್ತಾಜ್ ಅಲಿ ಜತೆಗೆ ರೆಹಮತ್‌ಗೆ ಅಕ್ರಮ ಸಂಬಂಧ ಇದೆ ಎಂದು ಪ್ರಚಾರ ಮಾಡಿ ಹೆಸರು ಹಾಳು ಮಾಡುವುದಾಗಿ ಹೆದರಿಸಿ ಬ್ಲ್ಯಾಕ್ ಮೇಲ್ ಮಾಡಿ 75 ಲ.ರೂ ಪಡೆದುಕೊಂಡಿದ್ದರು. ಅಲ್ಲದೆ ಇನ್ನೂ 50 ಲ.ರೂ. ಕೊಡಬೇಕೆಂದು ನಿರಂತರ ಬೆದರಿಕೆ ಹಾಕಿದ್ದರು. ಮಮ್ತಾಜ್ ಅವರ ಅಣ್ಣನ ಮನೆಯವರಿಗೂ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ರೀತಿಯಲ್ಲಿ ಆರು ಮಂದಿ ಆರೋಪಿಗಳು ಮಮ್ತಾಜ್ ಅಲಿ ಅವರ ಸಾವಿಗೆ ಕಾರಣರಾಗಿದ್ದಾರೆ. ಈ ಬಗ್ಗೆ ಮಮ್ತಾಜ್ ಅಲಿ ಅವರು ತನ್ನ ಅಣ್ಣನಿಗೆ ವಾಯ್ಸ ಮೆಸೇಜ್ ಕಳುಹಿಸಿದ್ದಾರೆ ಎಂಬಿತ್ಯಾದಿಯಾಗಿ ಕಾವೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಮಮ್ತಾಜ್ ಅವರ ಆಡಳಿತದ ಮಿಸ್ಬಾ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದ ರೆಹಮತ್‌ಗೆ 3 ವರ್ಷದಿಂದ ಮಮ್ತಾಜ್ ಪರಿಚಯವಿತ್ತು. ರೆಹಮತ್ ಅವರ ಕಷ್ಟಕಾಲದಲ್ಲಿ ಮಮ್ತಾಜ್ ಸಹಾಯ ಮಾಡಿದ್ದು, ಅದನ್ನೇ ಬಳಸಿಕೊಂಡು ಬ್ಲ್ಯಾಕ್ ಮೇಲ್‌ಗೆ ಮುಂದಾಗಿದ್ದಳು. 50 ಲ.ರೂ. ನೀಡಿ ಪ್ರಕರಣವನ್ನು ಇತ್ಯರ್ಥಪಡಿಸಲು ಯತ್ನ ನಡೆದಿತ್ತು ಎನ್ನಲಾಗಿದೆ. ಈ ನಡುವೆ ಮಮ್ತಾಜ್ ಜತೆ ರೆಹಮತ್ ಮಾತುಕತೆಯಾಡಿದ ವಾಯ್ಸ ಕ್ಲಿಪ್ ಅನ್ನು ಬಳಸಿಕೊಂಡು ಸತ್ತಾರ್ ಬ್ಲ್ಯಾಕ್‌ವೆುಲ್‌ಗೆ ಮುಂದಾಗಿದ್ದ ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ಜರ್ಜರಿತರಾದ ಮಮ್ತಾಜ್ ಆತ್ಮಹತ್ಯೆಗೆ ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.