ಕೋಝಿಕೋಡ್: ಮಲೆಯಾಳಂ ಚಿತ್ರರಂಗದ ಖ್ಯಾತ ಹಾಸ್ಯ ನಟ ಶಶಿ ಕಾಳಿಂಗ ಅಲಿಯಾಸ್ ವಿ ಚಂದ್ರಕುಮಾರ್ ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
59 ವರ್ಷದ ನಟ 2009ರಲ್ಲಿ ಬಿಡುಗಡೆಯಾದ ಕೇರಳ ಕೆಫೆ ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. ಈವರೆಗೆ ಸುಮಾರು 30 ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದರು. 2010ರಲ್ಲಿ ಬಿಡುಗಡೆಯಾಗಿದ್ದ “ಪ್ರಾಂಚಿಯೆಟ್ಟನ್ ಆಯಂಡ್ ದ ಸೈಂಟ್” ಸಿನಿಮಾದಲ್ಲಿ ಕಾಳಿಂಗ ನಟನೆ ಅತ್ಯುತ್ತಮವಾಗಿತ್ತು. ಈ ಸಿನಿಮಾದಲ್ಲಿ ಸೂಪರ್ ಸ್ಟಾರ್ ಮಮ್ಮುಟ್ಟಿ ಹೀರೋ ಆಗಿದ್ದರು.ಚಿಕ್ಕವಯಸ್ಸಿನಲ್ಲಿಯೇ ರಂಗಭೂಮಿಯಲ್ಲಿ ಹೆಚ್ಚು ಸಕ್ರಿಯವಾಗಿ ಭಾಗಿಯಾಗಿದ್ದರು.
ಕಾಳಿಂಗ ಅವರು ಅಡಮಿಂಟೆ ಮಗನ್ ಅಬು, ಅಮೆನ್, ಇಂಡಿಯನ್ ರುಪಿ ಹೀಗೆ ಹಲವು ಪ್ರಮುಖ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದರು. ಪ್ರಾಥಮಿಕ ಶಿಕ್ಷಣದ ನಂತರ ಕೋಝಿಕೋಡ್ ನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಕಾಳಿಂಗ ಅವರು ಪತ್ನಿ ಪ್ರಭಾವತಿ, ಪುತ್ರ ಚಂದ್ರಶೇಖರನ್ ನಾಯರ್, ಪುತ್ರಿ ಸುಕುಮಾರಿಯನ್ನು ಅಗಲಿದ್ದಾರೆ.