Monday, May 20, 2024
Homeಕರಾವಳಿಮಂಗಳೂರು ಗೋಲಿಬಾರ್ ಪ್ರಕರಣ; ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದ ಸರ್ಕಾರ!

ಮಂಗಳೂರು ಗೋಲಿಬಾರ್ ಪ್ರಕರಣ; ಪೊಲೀಸರಿಗೆ ಕ್ಲೀನ್ ಚಿಟ್ ನೀಡಿದ ಸರ್ಕಾರ!

spot_img
- Advertisement -
- Advertisement -

ಮಂಗಳೂರು : ಸಿಎಎ ಕಾಯ್ದೆ ವಿರೋಧಿಸಿ 2019ರ ಡಿಸೆಬರ್ 19ರಂದು ಮಂಗಳೂರಿನಲ್ಲಿ ನಡೆದ ಗಲಭೆ ಮತ್ತು ಗೋಲಿಬಾರ್ ಘಟನೆಯಲ್ಲಿ ಪೊಲೀಸರ ಕಡೆಯಿಂದ ಯಾವುದೇ ತಪ್ಪು ಆಗಿಲ್ಲ ಎಂದು ರಾಜ್ಯ ಸರಕಾರ ಹೈಕೋರ್ಟಿಗೆ ಹೇಳಿದೆ. ಅಲ್ಲದೆ, ಘಟನೆಯ ಬಗ್ಗೆ ನಡೆಸಿದ ಮ್ಯಾಜಿಸ್ಟೀರಿಯಲ್ ತನಿಖೆಯಲ್ಲಿ ಪೊಲೀಸರಿಗೆ ಕ್ಲೀನ್ ಚಿಟ್ ನೀಡಲಾಗಿದೆ.

ಸಿಎಎ ವಿರುದ್ಧ ಪ್ರತಿಭಟನೆ ನಡೆಸುವ ನಿರೀಕ್ಷೆಯಲ್ಲಿ 2019ರ ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ಸಿಆರ್‌ಪಿಸಿ ಸೆಕ್ಷನ್‌ 144 ಅಡಿಯಲ್ಲಿ ನಿಷೇಧಾಜ್ಞೆಯನ್ನು ಪೊಲೀಸರು ಜಾರಿಗೊಳಿಸಿದ್ದರು. ಅಂದು ನಡೆದ ಗುಂಡಿನ ದಾಳಿಯಲ್ಲಿ ಜಲೀಲ್ ಮತ್ತು ನೌಸೀನ್ ಎಂಬುವವರು ಮೃತಪಟ್ಟಿದ್ದರು.ಈ ಪ್ರಕರಣದ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಸರ್ಕಾರ ಆದೇಶಿಸಿತ್ತು.

ಗೋಲಿಬಾರ್ ಘಟನೆ ಸಂಬಂಧ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಶುಕ್ರವಾರ ಈ ಮಾಹಿತಿ ನೀಡಿದೆ.

ಸರಕಾರದ ಪರವಾಗಿ ಕೋರ್ಟಿಗೆ ಹಾಜರಾಗಿದ್ದ ಹೆಚ್ಚುವರಿ ಅಡ್ವಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ಗೋಲಿಬಾರ್ ಘಟನೆಯ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆ ಪೂರ್ಣಗೊಂಡಿದ್ದು, ಅದನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಲಾಗಿದೆ. ಅಲ್ಲದೆ, ಈ ಘಟನೆಯಲ್ಲಿ ಪೊಲೀಸರಿಂದ ಯಾವುದೇ ಲೋಪವಾಗಿಲ್ಲ. ವರದಿಯನ್ನು ಸರಕಾರ ಸ್ವೀಕಾರ ಮಾಡಿದೆ. ಘಟನೆ ಬಗ್ಗೆ ಆರೋಪಿತರು ಮತ್ತು ಆಸ್ತಿಪಾಸ್ತಿ ಹಾನಿ ಮಾಡಿದವರ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದು, ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮ್ಯಾಜಿಸ್ಟೀರಿಯಲ್ ತನಿಖಾ ವರದಿಯನ್ನು ಸ್ವೀಕರಿಸಿದ ನ್ಯಾಯಪೀಠ, ಸಿಐಡಿ ತನಿಖೆಯ ವರದಿಯನ್ನೂ ಅಫಿಡವಿಟ್ ಮೂಲಕ ಕೋರ್ಟಿಗೆ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿದೆ. ಅದಲ್ಲದೆ, ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ವರದಿಯನ್ನು ಪರಿಶೀಲನೆ ಮಾಡಲಾಗುವುದು. ಇದರ ಪ್ರತಿಯನ್ನು ಅಗತ್ಯವಿದ್ದರೆ ಈ ಪ್ರಕರಣದ ಅರ್ಜಿದಾರರ ಪರ ವಕೀಲರು ಪಡೆದುಕೊಳ್ಳಬಹುದು ಎಂದು ಹೇಳಿ, ಮುಂದಿನ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿದೆ.

ಅರ್ಜಿದಾರರ ಪರ ಹಾಜರಿದ್ದ ವಕೀಲ ಪ್ರೊ. ರವಿವರ್ಮ ಕುಮಾರ್, ‘ಪೊಲೀಸರ ವಿರುದ್ಧ ಕನಿಷ್ಠ 10 ದೂರುಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಒಂದನ್ನೂ ತನಿಖೆ ಮಾಡಿಲ್ಲ. ಹೈಕೋರ್ಟ್‌ ಸೂಚಿಸಿದ್ದರೂ, ಎಫ್‌ಐಆರ್ ದಾಖಲಿಸಿಲ್ಲ’ ಎಂದು ಹೇಳಿದರು.ಇದಲ್ಲದೆ, ಪೊಲೀಸರ ವಿರುದ್ಧ ಸಲ್ಲಿಕೆಯಾಗಿದ್ದ ದೂರುಗಳ ಬಗ್ಗೆ ಮಾಹಿತಿ ನೀಡುವಂತೆ ಸರಕಾರಕ್ಕೆ ಕಳೆದ ಜುಲೈನಲ್ಲಿ ಕೋರ್ಟ್ ನಿರ್ದೇಶನ ನೀಡಿತ್ತು. ಆ ಬಗ್ಗೆ ಈವರೆಗೂ ಸರಕಾರದ ಕಡೆಯಿಂದ ಯಾವುದೇ ಮಾಹಿತಿಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಲಾಗಿಲ್ಲ ಎಂದು ಅರ್ಜಿದಾರ ಪರ ವಕೀಲರು ಹೇಳಿದ್ದಾರೆ.

- Advertisement -
spot_img

Latest News

error: Content is protected !!