Monday, May 20, 2024
Homeತಾಜಾ ಸುದ್ದಿಮುಂಬೈಯ ತುಂಗಾ ಆಸ್ಪತ್ರೆಗಳ ಸಂಸ್ಥಾಪಕ, ಬೆಳ್ತಂಗಡಿ ಮೂಲದ ಮಧ್ವಗುತ್ತು ಭೋಜ ಎಂ.ಶೆಟ್ಟಿ ವಿಧಿವಶ

ಮುಂಬೈಯ ತುಂಗಾ ಆಸ್ಪತ್ರೆಗಳ ಸಂಸ್ಥಾಪಕ, ಬೆಳ್ತಂಗಡಿ ಮೂಲದ ಮಧ್ವಗುತ್ತು ಭೋಜ ಎಂ.ಶೆಟ್ಟಿ ವಿಧಿವಶ

spot_img
- Advertisement -
- Advertisement -

ಮುಂಬೈ: ನಗರದಲ್ಲಿ ವೈದ್ಯಕೀಯ ಸೇವೆಗೆ ಜನಪ್ರಿಯವಾಗಿರುವ ತುಂಗಾ ಆಸ್ಪತ್ರೆಗಳ ಸ್ಥಾಪಕ ಹಾಗೂ ಟ್ರಸ್ಟಿ ಮಧ್ವಗುತ್ತು ಭೋಜ ಮೋಹನ್ ಶೆಟ್ಟಿ (72) ವಿಧಿವಶರಾಗಿದ್ದಾರೆ.

ಮುಂಬೈಯ ಮೀರಾರೋಡ್, ಮಲಾಡ್ ಮತ್ತು ಬೊಯಿಸರ್ ನಲ್ಲಿ ಆಧುನಿಕ ಉಪಕರಣಗಳಿಂದ ಸುಸಜ್ಜಿತವಾದ ತುಂಗಾ ಸಮೂಹದ ಆಸ್ಪತ್ರೆಗಳನ್ನು ಹೊಂದಿದ್ದು, ಈ ಎಲ್ಲಾ ಆಸ್ಪತ್ರೆಗಳು ವೈದ್ಯಕೀಯ ಸೇವೆಯಲ್ಲಿ ಪ್ರಸಿದ್ದಿಯನ್ನು ಪಡೆದಿವೆ.

ಬೋಜ ಶೆಟ್ಟಿಯವರು ಮೂಲತಃ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಮಾಲಾಡಿ ಹೊಸಮನೆಯವರು.

ತನ್ನ ವೃತ್ತಿ ಜೀವನದಲ್ಲಿ ಸುದೀರ್ಘಕಾಲ ಹುಟ್ಟೂರಿನಿಂದ ಹೊರಗೆ ಮುಂಬೈ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿದ್ದರು. ತಾನು ಸ್ವತಃ ದೊಡ್ಡ ವಿದ್ಯಾವಂತರು ಅಲ್ಲದಿದ್ದರೂ ವಿದ್ಯೆಯ ಮಹತ್ವದ ಬಗ್ಗೆ ದೂರದರ್ಶಿತ್ವ ಉಳ್ಳವರಾಗಿದ್ದರು. ಆದುದರಿಂದಲೇ ತನ್ನ ನಾಲ್ಕು ಜನ ಮಕ್ಕಳಿಗೂ ಉತ್ತಮ ಶಿಕ್ಷಣವನ್ನು ನೀಡಿ ಸುಶಿಕ್ಷಿತರನ್ನಾಗಿಸಿ, ಇಂದು ಅವರೆಲ್ಲರನ್ನೂ ಸಮಾಜವೇ ಗುರುತಿಸುವಂತಹ ವ್ಯಕ್ತಿಗಳನ್ನಾಗಿ ರೂಪಿಸಿದ್ದಾರೆ.

ತನ್ನ ನಿವೃತ್ತಿ ಜೀವನದಲ್ಲಿ, ಮಕ್ಕಳೆಲ್ಲರೂ ಅವರವರ ಉದ್ಯೋಗ-ವ್ಯವಹಾರಗಳಲ್ಲಿ ಯಶಸ್ಸಿನ ಪಥದಲ್ಲಿ ಸಾಗುತ್ತಿರುವಾಗ, ಇವರು ತನ್ನ ಹುಟ್ಟೂರಿಗೆ ತೆರಳಿ, ಅಲ್ಲಿಯ ಸಮಾಜಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು ಶ್ರೀ ಭೋಜ ಶೆಟ್ಟಿಯವರು. ಮಡಂತ್ಯಾರು ಪರಿಸರದ ಹತ್ತಾರು ಸಂಘ-ಸಂಸ್ಥೆಗಳಿಗೆ, ಮಠ-ಮಂದಿರಗಳಿಗೆ ಕೊಡುಗೈ ದಾನಿಗಳಾಗಿ ಸಹಾಯ ಹಸ್ತವನ್ನು ಚಾಚುತ್ತಾ, ಯುವಕರನ್ನು ಹುರಿದುಂಬಿಸಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ.

ಇವರು ತನ್ನ ಸಮಕಾಲೀನರ ಅಥವಾ ಹಿರಿಯರ ಜೊತೆ ಬೆರೆಯುವುದಕ್ಕಿಂತ ಹೆಚ್ಚಾಗಿ ಸಮಯ ಕಳೆಯುತ್ತಿದ್ದುದು ಯುವಜನತೆಯ ಜೊತೆಗೆ. ಮಡಂತ್ಯಾರು ಪರಿಸರದಲ್ಲಿ ಬಂಟರ ಸಂಘಟನೆಯ ಅಗತ್ಯವಿದೆ ಎಂದು ಮನಗಂಡು, ಉತ್ಸಾಹಿ ಬಂಟ ತರುಣರೆಲ್ಲರನ್ನೂ ಸೇರಿಸಿ, ಮಡಂತ್ಯಾರು ವಲಯದ ಬಂಟರ ಸಂಘವನ್ನು ಸ್ಥಾಪಿಸಿ ಅದರ ಸ್ಥಾಪಕ ಗೌರವ ಅಧ್ಯಕ್ಷರಾಗಿದ್ದರು.

ಇವರು ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳದಲ್ಲಿ ಬಹಳಷ್ಟು ಆಸಕ್ತಿ ಹೊಂದಿದವರಾಗಿದ್ದರು. ಎರಡು ಜೊತೆ ಕಂಬಳದ ಕೋಣಗಳನ್ನು ಸಾಕಿ, ಪ್ರತಿಯೊಂದು ಕಂಬಳ ಕ್ರೀಡೆಯಲ್ಲಿ ಭಾಗವಹಿಸಸುತ್ತಿದ್ದರು. ಈ ಕೋಣಗಳು ಸುಮಾರು 21ಕ್ಕೂ ಅಧಿಕ ಬಹುಮಾನಗಳನ್ನು ಪಡೆದು ಕಂಬಳ ಜಗತ್ತಿನಲ್ಲಿ ಇವರ ಹೆಸರನ್ನು ಅಚ್ಚಳಿಯದೆ ಉಳಿಸಿವೆ.

ಮೃತರು ಪತ್ನಿ ವಸಂತಿ (ತುಂಗಾ) ಭೋಜ ಶೆಟ್ಟಿ (ಬೈಲು ಶೆಟ್ಟಿಪಾಲು ಕೊಳಂಬೆ) ಮಕ್ಕಳಾದ ಹರಿಪ್ರಸಾದ್ ಶೆಟ್ಟಿ, ರಾಜೇಶ್ ಶೆಟ್ಟಿ, ಡಾ, ಸತೀಶ್ ಶೆಟ್ಟಿ, ಪೂಜಾ ಉಮೇಶ್ ಶೆಟ್ಟಿ, ಸೊಸೆಯಂದಿರಾದ ಕಾಂತಿ ಹರಿಪ್ರಸಾದ್ ಶೆಟ್ಟಿ, ಆರ್ಚನ ರಾಜೇಶ್ ಶೆಟ್ಟಿ, ಡಾ. ದಿವ್ಯ ಸತೀಶ್ ಶೆಟ್ಟಿ, ಅಳಿಯ ಉಮೇಶ್ ಶೆಟ್ಟಿ, ಮೊಮ್ಮಕ್ಕಳಾದ ಆದರ್ಶ್, ಅಭಿಶೇಕ್, ಸಿದ್ದಾಂತ್, ಶ್ರೇಯ್, ಪ್ರಾರ್ಥನಾ, ಪ್ರತಿಶ್ಥ, ಶರನ್ ಮತ್ತು ಶ್ಲೋಕ್ ಹಾಗೂ ಅಪಾರ ಬಂದು ಮಿತ್ರರುಗಳನ್ನು ಅಗಲಿದ್ದಾರೆ.

ಇವರ ನಿಧನಕ್ಕೆ, ಜಾಗತಿಕ ಬಂಟರ ಸಂಘದ ಒಕ್ಕೂಟಗಳ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪದ್ಮನಾಭ ಪಯ್ಯಡೆ, ಜವಾಬ್ ನ ಅಧ್ಯಕ್ಷರಾದ ಸಿಎ ಐ ಆರ್ ಶೆಟ್ಟಿಯವರು, ಪ್ರತಿಷ್ಠಿತ ಉದ್ಯಮಿ ಬಿ ಆರ್ ಪೂಂಜಾರವರು ಹಾಗೂ ಮಹಾನಗರದ ಬಂಟರ ಸಮುದಾಯದ ಅನೇಕ ಗಣ್ಯರು, ಆಸ್ಪತ್ರೆಗಳ ಡಾಕ್ಟರುಗಳು, ಸಿಬ್ಬಂಧಿ ವರ್ಗ ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

- Advertisement -
spot_img

Latest News

error: Content is protected !!