ಕಾಸರಗೋಡು: ನಾಪತ್ತೆಯಾಗಿದ್ದ ಹಿಂದೂ ಯುವತಿ ಮುಸ್ಲಿಂ ಯುವಕನ ಜೊತೆ ಪೊಲೀಸ್ ಠಾಣೆಗೆ ಹಾಜರಾಗುವುದರೊಂದಿಗೆ ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಸದ್ದು ಮಾಡಿದೆ.
ಬದಿಯಡ್ಕದಲ್ಲಿ ಲವ್ ಜಿಹಾದ್ ನಡೆಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಸೇರಿ ಕಾಸರಗೋಡಿನ ಹಿಂದೂ ಸಂಘಟನೆಗಳು ಆರೋಪಿಸಿದ್ದು, ಮುಸ್ಲಿಂ ಲೀಗ್ ಮುಖಂಡನೊಬ್ಬ ಬೆಂಬಲ ನೀಡಿರುವ ಆರೋಪವೂ ವ್ಯಕ್ತವಾಗಿದೆ.
ಕಾಸರಗೋಡಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಯುವತಿ ನೇಹಾ,ಮಿರ್ಶಾದ್ ಎಂಬಾತನ ಜೊತೆ ತೆರಳಿದ್ದು, ನೇಹಾ ತಂದೆಯ ದೂರಿನಂತೆ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿತ್ತು.
ಮೇ 23ರಂದು ಮನೆಯಿಂದ ಹೊರಟಿದ್ದ ನೇಹಾ ನಾಪತ್ತೆಯಾಗಿದ್ದು, ದೂರಿನಲ್ಲಿ ಅಪಹರಣದ ಕುರಿತು ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು.
ಬದಿಯಡ್ಕ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದ ನೇಹಾ ಮತ್ತು ಮಿರ್ಶಾದ್, ಮೇ 27ರಂದು ಬದಿಯಡ್ಕ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಹೀಗಾಗಿ ಪೊಲೀಸರು ಕಾಸರಗೋಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಸದ್ಯ ನೇಹಾ ಸ್ವ ಇಚ್ಛೆಯಂತೆ ಮಿರ್ಶಾದ್ ಜೊತೆ ತೆರಳಿದ್ದು, ಕೇರಳದ ಮುಸ್ಲಿಂ ಲೀಗ್ ಮುಖಂಡನಿಂದ ಲವ್ ಜಿಹಾದ್ ಗೆ ಕುಮ್ಮಕ್ಕು ನೀಡಲ್ಪಟ್ಟಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ