ಮಾರಕ ಕರೋನಾ ವೈರಸ್ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದು, ಮೇ 3 ರ ವರೆಗೆ ಇದು ಮುಂದುವರೆಯಲಿದೆ. ಇದರ ಮಧ್ಯೆ ರಾಜ್ಯ ಸರ್ಕಾರ, ಕರೋನಾ ವ್ಯಾಪಕವಾಗಿ ಹರಡಿಲ್ಲದ ರಾಜ್ಯದ ಕೆಲ ಭಾಗಗಳಲ್ಲಿ ಇಂದು ಮಧ್ಯ ರಾತ್ರಿಯಿಂದಲೇ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಲಾಕ್ ಡೌನ್ ನಿರ್ಬಂಧ ಸಡಿಲಗೊಳ್ಳಲಿದ್ದು, ಬಡಗಿ, ಎಲೆಕ್ಟ್ರಿಷಿಯನ್, ಪ್ಲಂಬರ್, ಡಾಬಾ, ಕಟ್ಟಡ ನಿರ್ಮಾಣ ಕಾಮಗಾರಿ, ಕೊರಿಯರ್ ಸೇವೆ, ಲಾರಿ ರಿಪೇರಿ ಮಾಡುವ ಗ್ಯಾರೇಜ್ ಸೇರಿದಂತೆ ಕೆಲವೊಂದು ಅಗತ್ಯ ಸೇವೆಗಳಿಗೆ ಲಾಕ್ ಡೌನ್ ಸಡಿಲಿಕೆ ನಿರ್ಬಂಧ ಅನ್ವಯಿಸಲಿದೆ. ಕೃಷಿ, ಮೀನುಗಾರಿಕೆಗೆ ಅವಕಾಶ ಸಿಗಲಿದ್ದು, ರಸ ಗೊಬ್ಬರ ಮಾರಾಟದ ಅಂಗಡಿಗಳು ತೆರೆದಿರಲಿವೆ. ಹೋಟೆಲ್ ಗಳು ತೆರೆದರೂ ಅಲ್ಲಿಯೇ ಕುಳಿತು ಊಟ-ಉಪಹಾರ ಸೇವಿಸಲು ಅವಕಾಶವಿರುವುದಿಲ್ಲ. ಕೇವಲ ಪಾರ್ಸೆಲ್ ಮಾತ್ರ ಕೊಡಬಹುದಾಗಿದೆ.
ಮಾಲ್, ಚಿತ್ರಮಂದಿರ, ಆಟೋ, ವಿಮಾನ, ರೈಲು ಸಂಚಾರ, ಕ್ಯಾಬ್ ಮೊದಲಾದ ಸೇವೆಗಳಿಗೆ ಇರುವ ನಿರ್ಬಂಧ ಈ ಹಿಂದಿನಂತೆ ಮುಂದುವರೆಯಲಿದ್ದು, ಧಾರ್ಮಿಕ ಸಭೆ, ಸಮಾರಂಭಗಳ ಹೆಸರಿನಲ್ಲಿ ಸಾರ್ವಜನಿಕರು ಸೇರುವಂತಿಲ್ಲವೆಂದು ಹೇಳಲಾಗಿದೆ. ಮದ್ಯ ಮಾರಾಟಕ್ಕೆ ಇರುವ ನಿರ್ಬಂಧ ಮೇ 3 ರವರೆಗೆ ಮುಂದುವರೆಯಲಿದ್ದು, ಲಾಕ್ ಡೌನ್ ಪೂರ್ಣ ಪ್ರಮಾಣದಲ್ಲಿ ತೆರವುಗೊಂಡ ಬಳಿಕವೇ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಲಾಕ್ ಡೌನ್ ಸಡಿಲಿಕೆ ಮಾಡಿದರೂ ಕೆ.ಎಸ್.ಆರ್.ಟಿ.ಸಿ. ಹಾಗೂ ಬಿಎಂಟಿಸಿ ಬಸ್ ಗಳು ರಸ್ತೆಗಿಳಿಯುವುದಿಲ್ಲ. ಮುಂದೂಡಲ್ಪಟ್ಟಿರುವ ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷಾ ದಿನಾಂಕವನ್ನು ಮೇ 3 ರ ಲಾಕ್ ಡೌನ್ ಅವಧಿ ಮುಗಿದ ಬಳಿಕವೇ ಪ್ರಕಟಿಸಲಾಗುತ್ತದೆ.