ಮುಂಬೈ: ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಾರದು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಆಯಾ ರಾಜ್ಯ ಸರ್ಕಾರ ಹಾಗೂ ವಕ್ಫ್ ಮಂಡಳಿಗಳು ಕೂಡ ಈ ಕುರಿತು ಮುಸ್ಲಿಂ ಸಮುದಾಯಕ್ಕೆ ವಿನಂತಿ ಮಾಡಿದ್ದವು.
ಆದರೂ ಇದೆಲ್ಲವನ್ನು ಗಾಳಿಗೆ ತೂರಿ ಮಹಾರಾಷ್ಟ್ರದ ಔರಂಗಬಾದ್‌ನಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿರುವ ಘಟನೆ ನಡೆದಿದೆ. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕ ಪೊಲೀಸರು, ಸ್ಥಳಕ್ಕೆ ಹೋಗಿ ಅಲ್ಲಿದ್ದ ಕೆಲವರು ಠಾಣೆಗೆ ಕರೆದುಕೊಂಡು ಬರುವ ಪ್ರಯತ್ನ ಮಾಡಿದ್ದಾರೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
‘ನಮಾಜ್ ಮಾಡಲು 40 ಜನರು ಸೇರಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಅವರಲ್ಲಿ ಕೆಲವರನ್ನು ಠಾಣೆಗೆ ಕರೆತಂದಾಗ, ಅಲ್ಲಿನ ಸ್ಥಳೀಯರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ಮೂರು ಪೊಲೀಸರು ಗಾಯಗೊಂಡಿದ್ದಾರೆ” ಎಂದು ಔರಂಗಬಾದ್ ಎಸ್‌ಪಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ 31 ಜನರನ್ನು ಬಂಧಿಸಲಾಗಿದೆ. ಉಳಿದವರನ್ನು ಶೀಘ್ರದಲ್ಲಿ ವಶಕ್ಕೆ ಪಡೆಯುತ್ತೇವೆ ಎಂದು ಪೊಲೀಸ್ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.