ಬೆಂಗಳೂರು: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರದಂದು ಮೈಸೂರು ಲೋಕಾಯುಕ್ತ ಪೊಲೀಸರು ಮುಡಾ ಹಗರಣದ ತನಿಖೆ ನಡೆಸಬೇಕೆಂದು ಆದೇಶಿಸಿದ್ದು, ಈ ನಡುವೆ ಸಿಎಂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಗುರುವಾರಂದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ‘ನೈತಿಕತೆಯ ರಾಜಕೀಯ’ವನ್ನು ಎಂದೋ ಮೂಲೆಗೆ ಸರಿಸಿದ್ದು, ಇನ್ನು ತನ್ನ ಅಜೆಂಡಾ ಏನಿದ್ದರೂ ಭ್ರಷ್ಟರ ರಕ್ಷಿಸುವುದು, ದೇಶದ ಕಾನೂನನ್ನು ಉಲ್ಲಂಘಿಸುವವರನ್ನು ಉತ್ತೇಜಿಸುವುದೇ ಮೊದಲ ಆದ್ಯತೆ ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕರಣದಲ್ಲೂ ತೋರಿಸಿಕೊಟ್ಟಿದೆ. ವಾಲ್ಮೀಕಿ ನಿಗಮದ ತನಿಖೆ ತಾರ್ಕಿಕ ಅಂತ್ಯಕ್ಕೆ ಹೋದರೆ ಹೈ ಕಮಾಂಡ್ ಬುಡಕ್ಕೆ ಬರುತ್ತದೆ ಅಂತಾ ಕಾಂಗ್ರೆಸ್ ಹೈಕಮಾಂಡ್ಗೆ ಗೊತ್ತಿದೆ. ಈ ನಿಟ್ಟಿನಲ್ಲಿ ಭ್ರಷ್ಟ ಸಿಎಂ ಬೆನ್ನಿಗೆ ಕಾಂಗ್ರೆಸ್ ಹೈಕಮಾಂಡ್ ನಿಲ್ಲುತ್ತಿದೆ ಎಂದು ಆರೋಪಿಸಿದರು.
ಇನ್ನು ಪ್ರಸ್ತುತ ಎರಡೂ ನ್ಯಾಯಾಲಯಗಳ ಆದೇಶವು ನೀವು ತಪ್ಪಿತಸ್ಥರೆನ್ನುವಂತಹ ಭಾವ ರಾಜ್ಯದ ಜನತೆಯಲ್ಲಿ ಮೂಡಲು ಪೂರಕವಾಗಿದೆ. ಇನ್ನಾದರೂ ರಾಜ್ಯದ ನೈತಿಕ ರಾಜಕಾರಣದ ಪರಂಪರೆಯ ಘನತೆ ಕುಗ್ಗದಂತೆ ನಡೆದುಕೊಳ್ಳಿ ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ತಕ್ಷಣ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತೇವೆ.
ಇನ್ನು ಸಿಎಂ ಸಿದ್ಧರಾಮಯ್ಯ ಯಾವುದೇ ತನಿಖೆಗೆ ಸಿದ್ಧ ಎಂದು ಹೇಳಿದ್ದಾರೆ. ಮೈಸೂರು ಲೋಕಾಯುಕ್ತ ಸಿಎಂ ವಿರುದ್ಧ ತನಿಖೆ ನಡೆಸುವಂತೆ ಎಸ್ಪಿಗೆ ಆದೇಶಿಸಿದ್ದು, ತಕ್ಷಣ ಎಫ್ಐಆರ್ ದಾಖಲಿಸಿ ತನಿಖೆ ಮಾಡಬೇಕು. ಲೋಕಾಯುಕ್ತ ಪೊಲೀಸರಿಂದ ನ್ಯಾಯಯುತ ತನಿಖೆ ಅಸಾಧ್ಯ. ಹೀಗಾಗಿ ಸಿಬಿಐನಿಂದಲೇ ತನಿಖೆ ಆಗಬೇಕು. ಸಿಬಿಐ ತನಿಖೆಗೆ ಆದೇಶಿಸಿದರೆ ಗೌರವ ಮತ್ತಷ್ಟು ಹೆಚ್ಚಾಗುತ್ತದೆ ಎಂದರು.