ನವದೆಹಲಿ: ಕೋವಿಡ್ 19 ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮುಂದುವರಿದಿದ್ದು, ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ ಮಹಿಳೆಯೊಬ್ಬಳು ಪೊಲೀಸ್ ವ್ಯಾನ್ ನಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ದಿಲ್ಲಿಯ ಕೈಯಾಲಾದ ಮಿನಿ ಕುಮಾರ್ ಹಾಗೂ ಆಕೆಯ ಕುಟುಂಬ ಸದಸ್ಯರು ಪೊಲೀಸ್ ಠಾಣೆಗೆ ಆಗಮಿಸಿ ಮಹಿಳಾ ಕಾನ್ಸ್ ಟೇಬಲ್ ಅನ್ನು ಭೇಟಿಯಾಗಿದ್ದರು ಎಂದು ಡಿಸಿಪಿ ದೀಪಕ್ ಪುರೋಹಿತ್ ತಿಳಿಸಿದ್ದಾರೆ. ಗರ್ಭಿಣಿ ಮಹಿಳೆಗೆ ಆಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಡುವಂತೆ ಕಾನ್ಸ್ ಟೇಬಲ್ ಬಳಿ ಮನವಿ ಮಾಡಿಕೊಂಡಿದ್ದರು. ಬಳಿಕ ಆಕೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಪೊಲೀಸ್ ವ್ಯಾನ್ ನಲ್ಲಿ ಕರೆದೊಯ್ದಿದ್ದರು.
ವ್ಯಾನ್ ಆಸ್ಪತ್ರೆಗೆ ತಲುಪುವ ಮುನ್ನವೇ ಗುರುವಾರ ರಾತ್ರಿ 9.30ಕ್ಕೆ ಮಿನಿ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ವರದಿ ತಿಳಿಸಿದೆ. ಪೊಲೀಸ್ ವ್ಯಾನ್ ಒಂದು ಕಿಲೋ ಮೀಟರ್ ದೂರ ತೆರಳುವಷ್ಟರಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಳು. ನಂತರ ಪತಿ ಹಾಗೂ ಆಕೆಯ ಸಹೋದರಿ, ಮಹಿಳಾ ಕಾನ್ಸ್ ಟೇಬಲ್ ಸಹಾಯದೊಂದಿಗೆ ಮಗುವನ್ನು ಹೊರತೆಗೆಯಲಾಗಿತ್ತು. ನಂತರ ವೈದ್ಯರು ಸ್ಥಳಕ್ಕೆ ಆಗಮಿಸಿ ಹೊಕ್ಕಳ ಬಳ್ಳಿಯನ್ನು ಕತ್ತರಿಸಿದ ನಂತರ ತಾಯಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವಿವರಿಸಿದ್ದಾರೆ.