ಮಣಿಪಾಲ: ಚಲಿಸುತ್ತಿದ್ದ ಕಾರಿಗೆ ಬೆಂಕಿ ಹತ್ತಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ. ಮಾರುತಿ ಸ್ವಿಫ್ಟ್ ಡಿಸೈರ್ ಕಾರು ರಸ್ತೆ ಮಧ್ಯೆಯೇ ಬೆಂಕಿಗಾಹುತಿಯಾಗಿದೆ.
ಭಾಗೀರಥಿ ಎಂಬವರಿಗೆ ಸೇರಿದ ಕಾರು ಇದಾಗಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ ಇಡೀ ಕಾರನ್ನು ಆವರಿಸಿತು. ಮಹಿಳೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ತೆರಳುತ್ತಿದ್ದರು. ಆಸ್ಪತ್ರೆಗೆ ನೂರಿನ್ನೂರು ಮೀಟರ್ ಇರುವಾಗ ದುರ್ಘಟನೆ ಆಗಿದೆ. ಭಾಗೀರಥಿ ಮೂಲತಃ ಉಡುಪಿಯ ಬನ್ನಂಜೆಯ ನಿವಾಸಿಯಾಗಿದ್ದು, ಸಂಬಂಧಿಕರ ಆರೋಗ್ಯ ವಿಚಾರಣೆಗೆ ಹೋಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಎಂಸಿ ಮಣಿಪಾಲ ಆಸ್ಪತ್ರೆಯ ಫೈರ್ ಇಂಜಿನ್ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಕೆಎಂಸಿ ಅಗ್ನಿಶಾಮಕ ಸಿಬ್ಬಂದಿ, ಮಣಿಪಾಲ ಪೊಲೀಸರು ಮತ್ತು ಸಾರ್ವಜನಿಕರು ಜನ ಹತ್ತಿರ ಬಾರದಂತೆ ನೋಡಿಕೊಂಡರು. ಮಣಿಪಾಲಾ ಠಾಣಾ ಇನ್ಸ್ ಪೆಕ್ಟರ್ ಮಂಜುನಾಥ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾರನ್ನು ಮನೆಲ್ಲೇ ನಿಲ್ಲಿಸಿದ್ದ ಸಂದರ್ಭ ಇಲಿಗಳು ವಯರ್ ಕಟ್ ಮಾಡಿರಬಹುದು. ಹಾಗಾಗಿ ಶಾರ್ಟ್ ಆಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸ್ಥಳದಲ್ಲಿದ್ದ ಮೆಕ್ಯಾನಿಕ್ ಒಬ್ಬರು ಪೊಲೀಸರ ಜೊತೆ ಮಾತನಾಡುತ್ತಿದ್ದರು.