ಕುಂದಾಪುರ; ತಡರಾತ್ರಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಮನೆಯೊಂದು ಸುಟ್ಟು ಕರಕಲಾದ ಘಟನೆ ಘಟನೆ ಕರ್ಕುಂಜೆ ಗ್ರಾಮದ ನೇರಳಕಟ್ಟೆ ಸಮೀಪದ ಹಂದಕುಂದ ಎಂಬಲ್ಲಿ ನಡೆದಿದೆ.
ಹಂದಕುಂದ ಅರೆಕಲ್ಲು ನಿವಾಸಿ ಗಣಪು ಶೆಡ್ತಿ ಎಂಬುವವರ ಮನೆ ಬೆಂಕಿಗಾಹುತಿಯಾಗಿದೆ. ಮನೆಯ ಸಮೀಪದ ಬೇರೊಂದು ಮನೆಯಲ್ಲಿ ಭಜನಾ ಕಾರ್ಯಕ್ರಮವಿದ್ದ ಕಾರಣ, ಗಣಪು ಶೆಡ್ತಿ ಹಾಗೂ ಅವರ ಮೊಮ್ಮಗ ಮನೆಗೆ ಬೀಗ ಹಾಕಿ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿಯ ಕೆನ್ನಾಲಿಗೆಗೆ ಮನೆಯ ಮಾಡು ಮತ್ತು ಗೋಡೆಗಳು ಕುಸಿದು ಬಿದ್ದಿವೆ. ಮನೆಯೊಳಗಿದ್ದ ಚಿನ್ನಾಭರಣ ಹಾಗೂ ನಗದು ಟಿವಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಬಟ್ಟೆಬರೆ ಹಾಗೂ ಅಡುಗೆ ಪಾತ್ರೆಗಳು ಸೇರಿದಂತೆ ಎಲ್ಲಾ ಗೃಹೋಪಯೋಗಿ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಬೂದಿಯಾಗಿವೆ.ರಾತ್ರಿ ಸುಮಾರು 12 ಗಂಟೆಯ ನಂತರ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು, ಮುಂಜಾನೆ 2 ಗಂಟೆಯ ಸುಮಾರಿಗೆ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿ ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳೀಯರು ಹಾಗೂ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಕಿ ಪಕ್ಕದಲ್ಲೇ ಇದ್ದ ದನದ ಕೊಟ್ಟಿಗೆಗೆ ಹರಡದಂತೆ ತಡೆದು ಹೆಚ್ಚಿನ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನೆಯವರು ಭಜನೆಗೆ ತೆರಳಿದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಇಡೀ ಬದುಕೇ ಬೀದಿಗೆ ಬಂದಂತಾಗಿದೆ . ಶಾರ್ಟ್ ಸರ್ಕ್ಯೂಟ್ ನಿಂದ ಅನಾಹುತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.


