Friday, October 11, 2024
Homeಕರಾವಳಿಲಾಕ್ ಡೌನ್ ಸಂಕಷ್ಟ: ಕಲ್ಪ ಟ್ರಸ್ಟ್, ಕುದ್ರೋಳಿ ದೇವಸ್ಥಾನದಿಂದ ನಿತ್ಯ 700 ಮಂದಿಗೆ ಊಟ!

ಲಾಕ್ ಡೌನ್ ಸಂಕಷ್ಟ: ಕಲ್ಪ ಟ್ರಸ್ಟ್, ಕುದ್ರೋಳಿ ದೇವಸ್ಥಾನದಿಂದ ನಿತ್ಯ 700 ಮಂದಿಗೆ ಊಟ!

spot_img
- Advertisement -
- Advertisement -

ಮಂಗಳೂರು: ಲಾಕ್​ಡೌನ್ ಹಿನ್ನೆಲೆ ಹೊತ್ತಿನ ಊಟಕ್ಕೂ ಪರಿತಪಿಸುತ್ತಿರುವ ಹೊರ ರಾಜ್ಯದ, ಹೊರ ಜಿಲ್ಲೆಯ ಕೂಲಿ ಕಾರ್ಮಿಕರು, ನಿರಾಶ್ರಿತರ ಹೊಟ್ಟೆ ತುಂಬಿಸುವ ಕಾರ್ಯವನ್ನು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ ಹಾಗೂ ಕಲ್ಪ ಟ್ರಸ್ಟ್ ಕಳೆದ 12 ದಿನಗಳಿಂದ ಮಾಡುತ್ತಿವೆ. ಕಲ್ಪ ಟ್ರಸ್ಟ್‌ ಸಂಸ್ಥಾಪಕಿ ಪ್ರಮೀಳಾ ರಾವ್ ತಮ್ಮ ಕಲ್ಪ ಟ್ರಸ್ಟ್‌ ಮೂಲಕ ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಒಳಗಾದ ಈ ಬಡ ಕೂಲಿ ಕಾರ್ಮಿಕರಿಗೆ ಆಹಾರ ತಯಾರಿಸಿ ಸರಬರಾಜು ಮಾಡುವ ಬಗ್ಗೆ ಯೋಜನೆ ಹಾಕುತ್ತಾರೆ.
ಆದರೆ ಆಹಾರ ತಯಾರಕರು, ಪಾತ್ರೆ, ಗ್ಯಾಸ್ ಮುಂತಾದ ಯಾವುದೇ ವ್ಯವಸ್ಥೆ ಇರದ ಕಾರಣ ಹಲವಾರು ಕ್ಯಾಟರಿಂಗ್ ಸರ್ವೀಸ್ ಮಾಲೀಕರ ಬಳಿ ಮಾತನಾಡುತ್ತಾರೆ. ಆದರೆ ಯಾರೂ ಇವರ ನೆರವಿಗೆ ಬರದೆ ಕೈ ಚೆಲ್ಲುತ್ತಾರೆ. ಆಗ ನೆರವಾದವರೇ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದ ಆಡಳಿತ ಮಂಡಳಿ. ದೇವಾಲಯದ ಆಹಾರ ತಯಾರಿಕಾ ಪಾತ್ರೆ, ದೇವಾಲಯದ ಅನ್ನ ಛತ್ರದಲ್ಲೇ ಆಹಾರ ತಯಾರಿಸಲು ಸ್ಥಳಾವಕಾಶ, ದೇವಾಲಯದ ಸೇವಾ ದಳದವರಿಂದಲೇ ಆಹಾರ ತಯಾರಿ ಮಾಡುವ ಮೂಲಕ ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ.

ಇದರಿಂದ ಉತ್ತೇಜಿತರಾದ ಪ್ರಮೀಳಾ ರಾವ್ ದೇವಾಲಯದೊಂದಿಗೆ ಜಂಟಿಯಾಗಿ ಹಸಿದ ಕೂಲಿ ಕಾರ್ಮಿಕರಿಗೆ ಆಹಾರ ಸರಬರಾಜು ಮಾಡುವ ಕಾರ್ಯ ಆರಂಭಿಸುತ್ತಾರೆ. ಮೊದಲಿಗೆ ನಗರದ ಹೊರವಲಯದ ಬಜ್ಪೆ, ಪೊರ್ಕೊಡಿ, ಮಳಲಿ ಮುಂತಾದ ಕಡೆಗಳಲ್ಲಿರುವ ಕೂಲಿ ಕಾರ್ಮಿಕರಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ. ಈ ಮೂಲಕ ಸುಮಾರು 300ರಷ್ಟು ಮಂದಿಗೆ ಆಹಾರ ಸರಬರಾಜು ಕಾರ್ಯ ಆರಂಭವಾಗಿತ್ತು. ಅಲ್ಲಿಂದ ದಿನವೂ ಬೇರೆ ಬೇರೆ ಕಡೆಗಳಿಂದ ಇಲ್ಲೊಂದಿಷ್ಟು ಜನರಿಗೆ ಊಟದ ಅವಶ್ಯಕತೆ ಇದೆ ಎಂದು ಕರೆ ಬರಲು ಆರಂಭವಾಗುತ್ತದೆ. ಇದೀಗ ನಗರದ ಮಣ್ಣಗುಡ್ಡೆ, ಉರ್ವ ಸ್ಟೋರ್, ಕೂಳೂರು, ಗುಡ್ಡೆಯಂಗಡಿ, ಪಂಜಿಮೊಗರು, ಕಾವೂರು, ಬೈಕಂಪಾಡಿ ಮುಂತಾದ ಕಡೆಗಳಲ್ಲಿರುವ ಸುಮಾರು 700 ಮಂದಿಗೆ ಆಹಾರ ಸರಬರಾಜು ಮಾಡಲಾಗುತ್ತದೆ.

ದಿನವೂ ಪೂರ್ವಾಹ್ನ 11.30ರಿಂದ ಆರಂಭವಾಗುವ ಇವರ ಆಹಾರ ಸರಬರಾಜು ಕಾರ್ಯ 3.30ರವರೆಗೆ ನಡೆಯುತ್ತದೆ. ವಿವಿಧ ಕಡೆಗೆ ಎರಡು ಕಾರುಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತಿದ್ದು, ಹಸಿದವರಿಗೆ ಅವರಿರುವ ಸ್ಥಳಕ್ಕೇ ಹೋಗಿ ನಿತ್ಯವೂ ಅನ್ನ, ಸಾಂಬಾರ್, ಪಲ್ಯ ಪೂರೈಸಲಾಗುತ್ತದೆ. ತಮ್ಮ ಈ ಕಾರ್ಯದಲ್ಲಿ ಕುದ್ರೋಳಿ ದೇವಾಲಯ ಹಾಗೂ ಕಲ್ಪ ಟ್ರಸ್ಟ್‌ ಸದಸ್ಯರ ಸಹಕಾರ ಮಹತ್ತರವಾದುದು ಎಂದು ಪ್ರಮೀಳಾ ರಾವ್ ನೆನೆಯುತ್ತಾರೆ.

ಕುದ್ರೋಳಿ ದೇವಾಲಯದಿಂದ 150 ಕ್ವಿಂಟಾಲ್ ಅಕ್ಕಿ ವಿತರಣೆ: ಲಾಕ್​ಡೌನ್ ಪರಿಣಾಮ ಕೆಲಸವಿಲ್ಲದ ದಿನಗೂಲಿ ನೌಕರರಿಗೆ, ಬಡವರಿಗೆ ಜೀವನ ಸಾಗಿಸಲು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದ ವತಿಯಿಂದ ಹಾಗೂ ಭಕ್ತರ ನೆರವಿನಿಂದ ಅಕ್ಕಿ ವಿತರಿಸುವ ಕಾರ್ಯ ನಡೆಯುತ್ತಿದೆ. ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ರೂವಾರಿ, ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿಯವರ ಸಲಹೆಯಂತೆ ಈ ಅಕ್ಕಿ ವಿತರಣೆ ಕಾರ್ಯ ಆರಂಭಗೊಂಡಿದೆ‌. ಮೊದಲಿಗೆ 100 ಕ್ವಿಂಟಾಲ್ ಅಕ್ಕಿ ನೀಡುವ ಗುರಿ ಹೊಂದಿದ್ದು, ಇದೀಗ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 150 ಕ್ವಿಂಟಾಲ್​ವರೆಗೆ ಅಕ್ಕಿ ವಿತರಣಾ ಕಾರ್ಯ ನಡೆಯುತ್ತಿದೆ.

- Advertisement -
spot_img

Latest News

error: Content is protected !!