ಬೆಂಗಳೂರು: ನಿನ್ನೆ ರಾತ್ರಿ 9 ಗಂಟೆ ವೇಳೆಗೆ ಬೆಂಗಳೂರಿನ ಬ್ರಿಗೇಡ್ ರಸ್ತೆ ಸಮೀಪದ ಆರ್‌ಎಚ್‌ಪಿ ರಸ್ತೆಯಲ್ಲಿರುವ ಡುಯಟ್ ಬಾರ್ ಮಾಲೀಕ ಮನೀಶ್ ಎಂಬುವರ ಮೇಲೆ ಬಾರ್ ಎದುರಲ್ಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಅವರನ್ನು ಮಲ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.

ಚಿಕ್ಕಮಗಳೂರಿನ ಕೊಪ್ಪದ ಮನೀಶ್ ಶೆಟ್ಟಿ, ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಬಾರ್ ತೆರೆದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್, ‘ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ಬಾರ್ ಮುಂಭಾಗದಲ್ಲೇ ಮನೀಶ್ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಮಂಗಳೂರು ಕೊಡಿಕೆರೆ ಮನೋಜ್ ಗ್ಯಾಂಗ್ ಗೆ ಸಹಕಾರ ನೀಡುತ್ತಿದ್ದ ಮನೀಶ್ ಶೆಟ್ಟಿ. ಕೆಳ ಸಮಯದ ಹಿಂದೆ ಉಡುಪಿಯಲ್ಲಿ ಕಾರ್ಕಳ ಕಿಶನ್ ಹೆಗ್ಡೆ ಕೊಲೆ ಮಾಡಿದ ರಿವೆಂಜ್ ಹಿನ್ನೆಲೆ, ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಗ್ಯಾಂಗ್ ನಿಂದ ಮನೀಶ್ ಶೆಟ್ಟಿಯ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಖಾಸಗಿ ವಾಹಿನಿಗೆ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಕರೆ ಮಾಡಿ ತಾನು ಕೊಲೆ ಮಾಡಿಸಿರುವುದಾಗಿ ಹೇಳಿಕೆ ನೀಡಿದ್ದಾನೆ. ಮನೀಶ್ ಶೆಟ್ಟಿ ಮೇಲೆ ಬೆಂಗಳೂರು, ಉಡುಪಿ ,ಕೇರಳ, ವಿಟ್ಲ ಶೂಟೌಟ್ ಕೇಸ್ ಹಾಗೂ ವಿವಿಧ ಠಾಣೆಗಳಲ್ಲಿ ಹಲವು ಕೇಸ್ ಗಳಿವೆ. ಅಲ್ಲದೇ2007 ರ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಚೆಮ್ಮನೂರು ಜ್ಯೂವೆಲ್ಲರ್ಸ್ ರಾಬರಿ ಕೇಸ್ ನ ಪ್ರಮುಖ ಆರೋಪಿಯಾಗಿದ್ದ. ಇನ್ನು ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


