Saturday, May 18, 2024
Homeಕರಾವಳಿಸುಳ್ಯ: ಹಿರಿಯ ವಿದ್ವಾಂಸ, ಭಾಷಾ ವಿಜ್ಞಾನಿ ಕೋಡಿ ಕುಶಾಲಪ್ಪ ಗೌಡ ನಿಧನ

ಸುಳ್ಯ: ಹಿರಿಯ ವಿದ್ವಾಂಸ, ಭಾಷಾ ವಿಜ್ಞಾನಿ ಕೋಡಿ ಕುಶಾಲಪ್ಪ ಗೌಡ ನಿಧನ

spot_img
- Advertisement -
- Advertisement -

ಸುಳ್ಯ: ಹಿರಿಯ ವಿದ್ವಾಂಸ, ಭಾಷಾ ವಿಜ್ಞಾನಿ, ಖ್ಯಾತ ಸಾಹಿತಿ ಪ್ರೊ.ಕೋಡಿ ಕುಶಾಲಪ್ಪ ಗೌಡ(91) ವಯೋ ಸಹಜ ಅನಾರೋಗ್ಯದಿಂದ ನಿನ್ನೆ ರಾತ್ರಿ 10-30 ರ ಸುಮಾರಿಗೆ ಪುತ್ತೂರಿನ  ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ದಕ್ಷಿಣ ಕನ್ನಡದ ಪೆರಾಜೆ ಗ್ರಾಮದ ಕೋಡಿ ಮನೆತನದ ಕೃಷ್ಣಪ ಗೌಡರ ಹಾಗೂ ಗೌರಮ್ಮನವರ ತೃತೀಯ ಪುತ್ರರಾಗಿ 1931 ಮೇ 30 ರಂದು ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ಪೆರಾಜೆ ಹಾಗೂ ಸುಳ್ಯದಲ್ಲಿ ಮುಗಿಸಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ಮಾಡಿದರು. ಮಡಿಕೇರಿ ಸರಕಾರಿ ಕಾಲೇಜಿನಲ್ಲಿ ಬಿ.ಎ. ಮಾಡಿ 1956ರಲ್ಲಿ ಮದರಾಸು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವೀಧರರಾದರು.

ಪ್ರೊ.ಟಿ.ಪಿ. ಮೀನಾಕ್ಷಿ ಸುಂದರಂ ಅವರ ಮಾರ್ಗದರ್ಶನದಲ್ಲಿ ವಡ್ಡಾರಾಧನೆಯ ಭಾಷಿಕ ಅಧ್ಯಯನ ಎಂಬ ಸಂಶೋಧನಾ ಪ್ರಬಂಧಕ್ಕೆ ಅಣ್ಣಾಮಲೈ ವಿಶ್ವವಿದ್ಯಾಲಯದ ಎಂ.ಲಿಟ್ ಪದವಿ ಪಡೆದರು . ಮುಂದೆ ಅದೇ ವಿಶ್ವವಿದ್ಯಾಲಯದ ಪ್ರೊ. ಅಗಸ್ತ್ಯಲಿಂಗಂ ಅವರ ನಿರ್ದೇಶನದಲ್ಲಿ ಕೊಡಗು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕ್ರಿ.ಶ. 1,000 ದಿಂದ 1,400 ವರೆಗಿನ ಕನ್ನಡ ಶಾಸನಗಳ ಭಾಷಾವಿಶ್ಲೇಷಣೆ ಎಂಬ ಸಂಶೋಧನಾ ಪ್ರಬಂಧಕ್ಕೆ 67 ರಲ್ಲಿ ಡಾಕ್ಟರೇಟ್ ಪದವಿ ದೊರಕಿತು. ಮುಂದೆ ಆಂಧ್ರ ಹಾಗೂ ತಮಿಳುನಾಡಿನ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಸೇವೆ ಸಲ್ಲಿಸಿದರು.

ಇವರ ಸುಮಾರು 17 ಕೃತಿಗಳು ಪ್ರಕಟವಾಗಿವೆ. 4 ಪುಸ್ತಕಗಳು ಅಂಗ್ಲ ಭಾಷೆಯಲ್ಲಿ, 70 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಟಿಸಿದ್ದಾರೆ.ಅವರನ್ನು ಕಾಂಚಿ ಕಾಮಕೋಟಿ ಪೀಠಾಧಿಪತಿ ಜಯೇಂದ್ರ ಸರಸ್ವತಿಯವರ 50 ನೇ ಕಾಂಚಿ ಕಾಮಕೋಟಿ ವರ್ಧಂತಿಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯನ್ನು ಗೌರವಿಸಿ ಚಿನ್ನದ ಪದಕ ನೀಡಿ ಗೌರವಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಕೈಫಿಯತ್ತುಗಳು ಮಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರ ಪ್ರತಿಭೆಗೆ ಸೋವಿಯತ್ ಲ್ಯಾಂಡಿನ ಚಿನ್ನದ ಪದಕ ದೊರೆತಿದೆ. ಕನ್ನಡ ಭಾಷಾವಲೋಕನವೆಂಬ ಗ್ರಂಥವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ವರ್ಷದ ಉತ್ತಮ ಸೃಜನಶೀಲ ಗ್ರಂಥವೆಂದು ಆಯ್ಕೆ ಮಾಡಿದೆ. ಹೊರನಾಡಿನಲ್ಲಿದ್ದು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯನ್ನು ಗಮನಿಸಿ ಕರ್ನಾಟಕ ಸಾಹಿತ್ಯ ಅಕಾಡಮಿ 1987 ರಲ್ಲಿ ಗೌರವ ಪ್ರಶಸ್ತಿಯನ್ನು ಹಾಗೂ ಕರ್ನಾಟಕ ಸರಕಾರ ‘ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.ಇವರ ಅಗಲಿಕೆಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

- Advertisement -
spot_img

Latest News

error: Content is protected !!