Saturday, August 8, 2026
Homeಕರಾವಳಿಮಂಗಳೂರುಕೇರಳ : 9 ವರ್ಷಗಳ ಬಳಿಕ ಕರ್ನಾಟಕ ಮೂಲದ ಶಿವಾನಿ ಮತ್ತೆ ತಾಯ್ನಾಡಿಗೆ

ಕೇರಳ : 9 ವರ್ಷಗಳ ಬಳಿಕ ಕರ್ನಾಟಕ ಮೂಲದ ಶಿವಾನಿ ಮತ್ತೆ ತಾಯ್ನಾಡಿಗೆ

- Advertisement -
- Advertisement -

ಕೇರಳ : ಒಂಬತ್ತು ವರ್ಷಗಳ ಬಳಿಕ ಕೇರಳ ರಾಜ್ಯದ ಕಣ್ಣೂರು ಅಮಲ ಭವನದಿಂದ ಕರ್ನಾಟಕ ಮೂಲದ ಶಿವಾನಿ ಅಲಿಯಾಸ್ ಶಿವಮ್ಮ (44) ತಮ್ಮ ಕುಟುಂಬದವರನ್ನು ಸೇರಿಕೊಂಡು ತಾಯ್ನಾಡಿಗೆ ಮರಳಿದ್ದಾರೆ.

ಕರ್ನಾಟಕ ನೋಂದಣಿಯ ಕಾರಿನಲ್ಲಿ ಊರಿಗೆ ತೆರಳುವ ಮುನ್ನ ಶಿವಾನಿ, ಕಳೆದ ಒಂಬತ್ತು ವರ್ಷಗಳಿಂದ ತನ್ನೊಂದಿಗೆ ಆತ್ಮೀಯವಾಗಿ ಇದ್ದ ಅಮಲ ಭವನದ ಸಹೋದರಿಯರು ಹಾಗೂ ನಿವಾಸಿಗಳನ್ನು ಅಪ್ಪಿಕೊಂಡು ಬೀಳ್ಕೊಟ್ಟರು. ಸಹೋದರಿಯರಿಗೆ ಪ್ರೀತಿಯ ಮುತ್ತು ನೀಡಿ, ಕಣ್ಣೀರಿನ ವಿದಾಯದೊಂದಿಗೆ ತನ್ನ ಕುಟುಂಬದವರೊಂದಿಗೆ ತಾಯ್ನಾಡಿನತ್ತ ಪ್ರಯಾಣ ಬೆಳೆಸಿದರು.ಕಣ್ಣೂರು ನಗರದ ಮೇಲ್ಚೊವ್ವದಲ್ಲಿರುವ ಅಮಲ ಭವನ ಈ ಅಪರೂಪದ ಹಾಗೂ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.

2017ರ ಜುಲೈ 1ರಂದು ಕಣ್ಣೂರು ನಗರದಲ್ಲಿ ಪತ್ತೆಯಾಗಿದ್ದ ಶಿವಮ್ಮ ಅವರನ್ನು ಪಟ್ಟಣದ ಪೊಲೀಸರು ಮೇಲ್ಚೊವ್ವದಲ್ಲಿರುವ ಅಮಲ ಭವನಕ್ಕೆ ದಾಖಲಿಸಿದ್ದರು. ಅಂದು ಸ್ವಲ್ಪ ಮಟ್ಟಿನ ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ಹೊಂದಿದ್ದ ಅವರು, ತಮ್ಮ ಊರು ಕರ್ನಾಟಕದ ರಾಯಚೂರು ಎಂಬುದು ಮತ್ತು ಕಾರಿನಲ್ಲಿ ಕಣ್ಣೂರಿಗೆ ಬಂದಿದ್ದೇನೆ ಎಂಬುದನ್ನು ಮಾತ್ರ ಹೇಳಲು ಸಾಧ್ಯವಾಗುತ್ತಿತ್ತು.

ಅಮಲ ಭವನದಲ್ಲಿ ಆಗ ಸುಮಾರು 90 ಮಂದಿ ನಿವಾಸಿಗಳಿದ್ದರು. ಶಿವಮ್ಮ ಅವರು 91ನೇ ಸದಸ್ಯೆಯಾಗಿ ಸೇರ್ಪಡೆಯಾದರು. ಅಲ್ಲಿನ ಸಹೋದರಿಯರು ಅವರಿಗೆ ‘ಶಿವಾನಿ’ ಎಂದು ಹೆಸರಿಟ್ಟರು. ಕೆಲವೇ ದಿನಗಳಲ್ಲಿ ಅವರು ಅಮಲ ಭವನದ ಸಹೋದರಿಯರು ಹಾಗೂ ನಿವಾಸಿಗಳೊಂದಿಗೆ ಆತ್ಮೀಯವಾಗಿ ಬೆರೆತರು. ಅಲ್ಲದೆ ಮಲಯಾಳಂ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವುದನ್ನೂ ಕಲಿತರು.ಆದರೆ, ಆಗಾಗ್ಗೆ ತಮ್ಮ ತಾಯ್ನಾಡಿಗೆ ಮರಳುವ ಬಯಕೆಯನ್ನು ಶಿವಾನಿ ವ್ಯಕ್ತಪಡಿಸುತ್ತಿದ್ದರು.ಶಿವಾನಿಯ ಕುಟುಂಬದವರನ್ನು ಪತ್ತೆಹಚ್ಚುವ ಜವಾಬ್ದಾರಿಯನ್ನು ಫ್ರಾನ್ಸಿಸ್ಕನ್ ಕ್ಲಾರಿಸ್ಟ್ ಕಾಂಗ್ರಿಗೇಷನ್ (FCC) ಅಡಿಯಲ್ಲಿ ಬೆಳ್ತಂಗಡಿ ಪ್ರದೇಶದ ಪ್ರಾದೇಶಿಕ ಸುಪೀರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಸಿಸ್ಟರ್ ಡೈಸಿ ಥಾಮಸ್ ವಹಿಸಿಕೊಂಡರು.

ಅಮಲ ಭವನಕ್ಕೆ ತೆರಳಿ ಶಿವಾನಿಯೊಂದಿಗೆ ಕನ್ನಡದಲ್ಲಿ ಮಾತನಾಡಿದ ಸಿಸ್ಟರ್ ಡೈಸಿ ಥಾಮಸ್, ಅವರ ಊರು ರಾಯಚೂರು ಎಂದು ಖಚಿತಪಡಿಸಿಕೊಂಡರು. ಬಳಿಕ ಬೆಳ್ತಂಗಡಿ ನಿವಾಸಿ ರೆಜಿ ವಲಿಯಒನತ್ ಅವರ ಸಹಾಯದಿಂದ ವೇಣೂರು ಪೊಲೀಸ್ ಠಾಣೆಯ ಸಿಬ್ಬಂದಿ ಬಸವರಾಜ್ ಪೂಜಾರಿ ಅವರನ್ನು ಸಂಪರ್ಕಿಸಿದರು.ಪೊಲೀಸರ ಪರಿಶ್ರಮದ ಫಲವಾಗಿ ಶಿವಾನಿಯ ಕುಟುಂಬದವರನ್ನು ಪತ್ತೆಹಚ್ಚಲಾಯಿತು. ಕಾಣೆಯಾಗಿದ್ದ ಶಿವಾನಿಗಾಗಿ ಕುಟುಂಬಸ್ಥರು ಹಲವು ವರ್ಷಗಳಿಂದ ಹುಡುಕಾಟ ನಡೆಸುತ್ತಿದ್ದರು.ವಿವಾಹಿತೆಯಾಗಿರುವ ಶಿವಾನಿಗೆ ಒಬ್ಬ ಮಗಳೂ ಇದ್ದಾಳೆ.ಕೊನೆಗೂ ಕುಟುಂಬದವರನ್ನು ಸೇರಿದ ಶಿವಾನಿ, ಅಮಲ ಭವನದ ವ್ಯವಸ್ಥಾಪಕಿ ಸಿಸ್ಟರ್ ಮರೀನಾ ಅವರಿಗೆ ಪ್ರೀತಿಯ ಮುತ್ತು ನೀಡಿ ವಿದಾಯ ಹೇಳಿದರು. ಬಳಿಕ ಅವರ ಸಹೋದರ ಮಲ್ಲಯ್ಯ, ಅತ್ತಿಗೆ ಲಕ್ಷ್ಮಿ, ಸಂಬಂಧಿ ದುರ್ಗಪ್ಪ ಹಾಗೂ ರಾಯಚೂರಿನ ಪೊಲೀಸ್ ಅಧಿಕಾರಿ ಹನುಮಂತ ಅವರು ಶಿವಾನಿಯನ್ನು ತಮ್ಮೊಂದಿಗೆ ಆ.7 ರಂದು ಊರಿಗೆ ಕರೆದುಕೊಂಡು ಹೋದರು.

ಅಮಲ ಭವನದ ವ್ಯವಸ್ಥಾಪಕಿ ಸಿಸ್ಟರ್ ಮರೀನಾ ಹಾಗೂ ಸಹೋದರಿಯರು ಶಿವಾನಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು. ಒಂಬತ್ತು ವರ್ಷಗಳ ಕಾಲ ತನ್ನನ್ನು ಪ್ರೀತಿಯಿಂದ ನೋಡಿಕೊಂಡ ಎಲ್ಲರಿಗೂ ಶಿವಾನಿ ಕೃತಜ್ಞತೆ ಸಲ್ಲಿಸಿ ತಾಯ್ನಾಡಿನತ್ತ ಹೆಜ್ಜೆ ಹಾಕಿದರು.ವಿವಿಧ ಸಂದರ್ಭಗಳಲ್ಲಿ ಅಮಲ ಭವನಕ್ಕೆ ಆಗಮಿಸಿದ ಸುಮಾರು 30 ಮಂದಿ ಇನ್ನೂ ತಮ್ಮ ಕುಟುಂಬದವರನ್ನು ಸೇರಿಕೊಳ್ಳುವ ನಿರೀಕ್ಷೆಯಲ್ಲಿ ಅಲ್ಲಿಯೇ ಉಳಿದಿದ್ದಾರೆ.ಅಮಲ ಭವನದ ನಿರ್ದೇಶಕರಾಗಿ ಬ್ರದರ್ ಜೋಸೆಫ್ ಚಾರುಪ್ಲಕ್ಕಲ್ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -

Latest News

error: Content is protected !!