ಕಳೆದ ವಾರ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇಬ್ಬರು ಸಾಧುಗಳು ಮತ್ತು ಅವರ ವಾಹನ ಚಾಲಕನ ಹತ್ಯೆಗೆ ಸಂಬಂಧಿಸಿದಂತೆ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಬಹಳ ಕಟುವಾಗಿ ಖಂಡಿಸಿದ್ದಾರೆ. ಸಂತ ಭೂಮಿಯೆಂದೇ ಹೆಸರಾದ ಮಹಾರಾಷ್ಟ್ರದಲ್ಲಿ ನಡೆದ ಘಟನೆ ಮನುಕುಲದ ದೊಡ್ಡ ಕ್ರೌರ್ಯ. ಸಾಧು ಸಂತರ ಪುಣ್ಯಭೂಮಿಯಾದ ಭಾರತದಲ್ಲಿ ಅಂತಹ ಸಾಧುಗಳಿಗೆ ಚಿತ್ರ ಹಿಂಸೆ ಕೊಟ್ಟು ಕೊಲೆ ಮಾಡಿದ್ದು ಒಂದು ದೊಡ್ಡ ದುರಂತ. ಇದರ ಬಗ್ಗೆ ಸಮಸ್ತ ನಾಗರೀಕ ಸಮಾಜ ಮತ್ತು ದೇಶದ ಎಲ್ಲಾ ಸಾಧು ಸಂತರು ಜಾಗೃತರಾಗಬೇಕು. ತಕ್ಷಣ ಸರ್ಕಾರ ಮತ್ತು ಪೊಲೀಸ್ ಇಲಾಖೆ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಆಗ್ರಹಿಸಿದ್ದಾರೆ.
ಮುಂಬೈನಿಂದ ಸುಮಾರು 125 ಕಿ.ಮೀ ದೂರದ ಪಾಲ್ಘರ್ ಜಿಲ್ಲೆಯ ಗಡ್ಚಿಂಚಲೆ ಗ್ರಾಮದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಲಾಗಿತ್ತು. ಈ ಮೂವರಲ್ಲಿ ಒಬ್ಬರು 70 ವರ್ಷದ ಸಾಧು ಕೂಡ ಇದ್ದರು. ಜನರು ದೊಣ್ಣೆ ಮತ್ತು ಕಲ್ಲಿನಿಂದ ಮೂವರನ್ನು ಸಾಯುವ ಹಾಗೇ ಹೊಡೆಯುತ್ತಿದ್ದ ವಿಡಿಯೋ ವೈರಲ್ ಕೂಡ ಆಗಿತ್ತು. ಜೊತೆಗೆ ಇವರನ್ನು ರಕ್ಷಣೆ ಮಾಡಲು ಬಂದ ಪೊಲೀಸರ ಮೇಲೂ ಹಲ್ಲೆ ಮಾಡಿ ಅವರ ವಾಹನವನ್ನು ಜಖಂ ಮಾಡಲಾಗಿತ್ತು.
