ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮ, ಕರಾವಳಿ ಮಾತ್ರವಲ್ಲದೇ ದೇಶ ವಿದೇಶದಲ್ಲೂ ಲಕ್ಷಾಂತರ ಸಂಖ್ಯೆಯ ಭಕ್ತರನ್ನು ಹೊಂದಿರುವ ಶಕ್ತಿ ದೇವತೆ.

ದುಷ್ಟ ಅರುಣಾಸುರನನ್ನು ಸಂಹಾರಗೈದು ಕಟೀಲಿನಲ್ಲಿ ನೆಲೆನಿಂತ ಭ್ರಮರಾಂಬಿಕೆಯ ದರ್ಶನ ಪಡೆಯುವುದಕ್ಕೆ ದಿನ ನಿತ್ಯ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಆದರೆ ಲಾಕ್‍ಡೌನ್‍ನಿಂದ ಸದ್ಯ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶ ಇಲ್ಲ. ಹೀಗಾಗಿ ಭಕ್ತರು ಮನೆಯಲ್ಲೇ ತಾಯಿಯ ದರ್ಶನ ಪಡೆಯುವಂತಾಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಎರಡು ದುರ್ಗಾಪರಮೇಶ್ವರಿಯ ಫೋಟೋ ಹಾಕಲಾಗುತ್ತಿದೆ.

ದೇವಿಗೆ ದಿನನಿತ್ಯ ಪೂಜೆ ಸಲ್ಲಿಸುವ ಅರ್ಚಕರು, ಭಕ್ತರು ಮನೆಯಲ್ಲಿ ಕುಳಿತು ತಮ್ಮ ಅಂಗೈಯಲ್ಲೇ ದರ್ಶನ ಪಡೆಯಲಿ ಎನ್ನುವ ಉದ್ದೇಶದಿಂದ ಬೆಳಗ್ಗೆ ಹಾಗೂ ಸಂಜೆ ಪೂಜೆ ಬಳಿಕ ಅಲಂಕೃತ ದೇವಿಯ ಫೋಟೋ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚುಕೊಳ್ಳುತ್ತಿದ್ದಾರೆ. ಇದನ್ನು ಸಹಸ್ರಾರು ಭಕ್ತರು ವೀಕ್ಷಿಸಿ ತಾವು ಶೇರ್ ಮಾಡುತ್ತಿದ್ದಾರೆ.

ಅಲ್ಲದೇ ವಾಟ್ಸಪ್ ಸ್ಟೇಟಸ್‍ನಲ್ಲೂ ಕಟೀಲು ತಾಯಿ ಫೋಟೋ ಹಾಕುತ್ತಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿಯ ಈ ಹೊಸ ಪ್ರಯತ್ನ ಭಕ್ತರಿಗೂ ಖುಷಿ ಕೊಟ್ಟಿದೆ.