ಮಂಗಳೂರು: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಜನರ ನಡುವೆ ಹೆಚ್ಚೆಚ್ಚು ಚರ್ಚೆಯಾಗುತ್ತಿದೆ. ಇದೇ ವೇಳೆ ಸೈಬರ್ ಕ್ರಿಮಿನಲ್‌ಗಳು ಇದರ ಲಾಭ ಪಡೆಯಲು ಹುನ್ನಾರ ನಡೆಸುತ್ತಿರುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ಯಾವ ರೀತಿ ಸೈಬರ್ ಕಳ್ಳರು ಕಾಶ್ಮೀರ್ ಫೈಲ್ಸ್ ಚಿತ್ರದ ಹೆಸರಲ್ಲಿ ಜನರನ್ನು ಲೂಟಿ ಮಾಡಲು ತೊಡಗಿದ್ದಾರೆ ಅನ್ನುವುದನ್ನು ತಿಳಿಸಿದ್ದಾರೆ.

ವಾಟ್ಸಪ್ ಜಾಲತಾಣದಲ್ಲಿ ಕಾಶ್ಮೀರ್ ಫೈಲ್ಸ್ ಚಿತ್ರದ ಫ್ರೀ ಡೌನ್ಲೋಡ್ ಲಿಂಕ್ ಹರಿದಾಡುತ್ತಿದ್ದು, ಅದನ್ನು ಒತ್ತಿದಲ್ಲಿ ನೀವು ವೈರಸ್ ದಾಳಿಗೆ ಒಳಗಾಗುತ್ತೀರಿ. ಡೌಗ್ಲೋಡ್ ಲಿಂಕ್ ಹೆಸರಲ್ಲಿ ಸೈಬರ್ ಹ್ಯಾಕರ್ಸ್ ವೈರಸ್ ಕಳಿಸುತ್ತಿದ್ದು, ಅದರ ಮೂಲಕ ನಮ್ಮ ಆಂಡ್ರಾಯ್ಡ್ ಫೋನ್ ಅಥವಾ ಲ್ಯಾಪ್ ಟಾಪ್ ನಲ್ಲಿರುವ ಮಾಹಿತಿಗಳನ್ನು ಕದಿಯುವ ಸಾಧ್ಯತೆ ಇರುತ್ತದೆ.
ಅಲ್ಲದೆ ಒಂದುವೇಳೆ, ಈ ಲಿಂಕ್ ಅನ್ನು ಒತ್ತಿದಲ್ಲಿ ಅದರಲ್ಲಿ ಇರುವ ವೈರಸ್ ಮೂಲಕ ಸ್ಮಾರ್ಟ್ ಫೋನನ್ನು ಹ್ಯಾಕ್ ಮಾಡುವ ಸೈಬರ್ ಕಳ್ಳರು, ನಮಗೆ ತಿಳಿಯದಂತೆ ಮೊಬೈಲ್ ಜೊತೆಗೆ ಲಿಂಕ್ ಆಗಿರುವ ಬ್ಯಾಂಕ್ ಮಾಹಿತಿಗಳನ್ನು ಪಡೆಯುತ್ತಾರೆ. ಅಲ್ಲದೆ, ಮೊಬೈಲ್ ನಲ್ಲಿರುವ ಇತರ ಮಾಹಿತಿಗಳನ್ನೂ ಕದಿಯುತ್ತಾರೆ. ಅದಕ್ಕಾಗಿಯೇ ಕಾಶೀರ್ ಫೈಲ್ಸ್ ಚಿತ್ರದ ಹೆಸರಲ್ಲಿ ವೈರಸ್ ಅನ್ನು ಕಳಿಸುತ್ತಿದ್ದಾರೆ. ಜನರು ಸುಲಭದಲ್ಲಿ ಸಿನಿಮಾ ನೋಡಬಹುದೆಂದು ಡೌನ್ಲೋಡ್ ಲಿಂಕ್ ಒತ್ತಿ ಅಪಾಯಕ್ಕೀಡಾಗದಿರಿ ಎಂದು ಅನಂತ ಪ್ರಭು ತಮ್ಮ ಫೇಸ್ಟುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಅದಕ್ಕಾಗಿ ವಾಟ್ಸಪ್ ಅಥವಾ ಇನ್ನಿತರ ಜಾಲತಾಣದಲ್ಲಿ ಲಿಂಕ್ ಕಳಿಸಿದವರು ಪರಿಚಯದವರೇ ಆಗಿದ್ದರೂ, ಡೌನ್ಲೋಡ್ ಮಾಡುವ ಮೊದಲು ಅವರನ್ನೇ ಸಂಪರ್ಕಿಸಿ. ಅದರಲ್ಲಿ ಇರುವ ಸಿನಿಮಾದ ಫೈಲನ್ನು ನೋಡಲು ಸಾಧ್ಯವಾಗುತ್ತದೆಯೇ ಎಂದು ಖಚಿತಪಡಿಸಿಕೊಂಡೇ ಡೌನ್ಲೋಡ್ ಮಾಡಿಕೊಳ್ಳಿ. ಇಲ್ಲದೇ ಇದ್ದಲ್ಲಿ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಸೈಬರ್ ಹ್ಯಾಕರ್ಸ್ ಕಾಶ್ಮೀರ್ ಫೈಲ್ಸ್ ಹೆಸರಿನಲ್ಲಿಯೇ ವೈರಸ್ ಬಿಡುತ್ತಿದ್ದಾರೆ. ಎಂದು ಅನಂತ ಪ್ರಭು ಎಚ್ಚರಿಸಿದ್ದಾರೆ.
ಅನಂತ ಪ್ರಭು ಅವರು ಮಂಗಳೂರಿನ ಕಾಲೇಜು ಒಂದರಲ್ಲಿ ಪ್ರಾಧ್ಯಾಪಕರಾಗಿದ್ದು, ಅದರ ಜೊತೆಗೆ ಪೊಲೀಸ್ ಇಲಾಖೆಗೆ ಸೈಬರ್ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡುತ್ತಿದ್ದಾರೆ.