ಕಾರ್ಕಳ : ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲೂಕಿನ ಕೆದಿಂಜೆ ಗ್ರಾಮದ ಮಾವಿನಕಟ್ಟೆ ಸಮೀಪ ನಡೆದಿದೆ. ನಿಟ್ಟೆ ಗ್ರಾಮದ ಹರಿಶ್ಚಂದ್ರ ಗುಡಿಗಾರ್ (62) ಮೃತರು.
ಹರಿಶ್ಚಂದ್ರ ಗುಡಿಗಾರ್ ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ದಿನಾಂಕ 19/03/2026 ರಂದು ಮಧ್ಯಾಹ್ನ ಸುಮಾರು 2:30 ಗಂಟೆ ವೇಳೆಗೆ ಪಡುಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಸ್ಕೂಟರ್ (KA 20 EY 9600) ನಲ್ಲಿ ಬರುತ್ತಿದ್ದಾಗ ಕೆದಿಂಜೆ ಗ್ರಾಮದ ಮಾವಿನಕಟ್ಟೆ ಬಳಿ ಸ್ಕೂಟರ್ ಅನ್ನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿದ ಪರಿಣಾಮ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಹರಿಶ್ಚಂದ್ರ ಗುಡಿಗಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಕ್ಷಣ ಅಂಬುಲೆನ್ಸ್ ಮೂಲಕ ಕಾರ್ಕಳದ ಡಾ. ಟಿ.ಎಂ.ಎ ಪೈ ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ನೀಡುವ ವೇಳೆ ಅವರು ಮೃತಪಟ್ಟಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.


