ಉಡುಪಿ: ಹನಿಮೂನ್ ಕನಸು ಹೊತ್ತಿದ್ದ ಮದುಮಗ ನಾಲ್ಕು ಗೋಡೆಯ ನಡುವೆ ಲಾಕ್ ಆಗಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ನವ ವಿವಾಹಿತ ಜೋಡಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಕಾರ್ಕಳದ ಬೋಳ ಗ್ರಾಮದ ನವ ವಿವಾಹಿತ ಮತ್ತು ಮದುವೆಯಲ್ಲಿ ಭಾಗವಹಿಸಿದ್ದ 26ಮಂದಿಗೆ ಹೋಂ ಕ್ವಾರಂಟೈನ್‍ಗೆ ಹಾಕಲಾಗಿದೆ.
ಉಡುಪಿ ಜಿಲ್ಲಾ ಗಡಿ ಸಂಪೂರ್ಣ ಬಂದ್ ಮಾಡಿದೆ. ಆದರೂ ಒಳದಾರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನರು ಉಡುಪಿಯ ಕಾರ್ಕಳ ತಾಲೂಕಿಗೆ ಬರುತ್ತಿದ್ದಾರೆ. ಉಡುಪಿಯಿಂದ ದಕ್ಷಿಣ ಕನ್ನಡಕ್ಕೆ ಹೋಗಿ ಬಂದವರನ್ನು ಕ್ವಾರಂಟೈನ್ ಮಾಡಿರುವ ಆರೋಗ್ಯ ಇಲಾಖೆ, ಕಾರ್ಕಳಕ್ಕೆ ಆಗಮಿಸಿದ ಹೊರ ಜಿಲ್ಲೆಯ ಜನರಿಗೂ ಕ್ವಾರಂಟೈನ್ ಮಾಡಿದ್ದಾರೆ.
ಮಂಗಳೂರನಲ್ಲಿ ಖಾಸಗಿ ಉದ್ಯೋಗಿಯಾಗಿರುವ ಮದುಮಗ, ಕಾಪು ತಾಲೂಕು ಕುತ್ಯಾರಿನಲ್ಲಿ ಮದುವೆಯಾಗಿದ್ದರು. ಮದುವೆ ಮುಗಿಸಿ ಸಂಜೆ ಮನೆಗೆ ಬಂದ ವಿವಾಹಿತನಿಗೆ ಕ್ವಾರಂಟೈನ್ ಸೀಲ್ ಹಾಕಿ 28 ದಿನಗಳ ಗೃಹಬಂಧನಕ್ಕೆ ಒಳಪಡಿಸಲಾಗಿದೆ.
ಮದುವೆಯ ಮೊದಲ ರಾತ್ರಿಯೇ ಹೋಮ್ ಕ್ವಾರಂಟೈನ್ ಹಾಕಿದ್ದು, ನವಜೋಡಿಗೆ ನಿರಾಶೆಯಾಗಿದೆ. ಮನೆ ಬಳಿ ಕಾದುಕುಳಿತಿದ್ದ ಆಶಾ ಕಾರ್ಯಕರ್ತೆಯರು ಕ್ವಾರಂಟೈನ್ ಮಾಡಲು ಸಿದ್ಧರಾಗಿದ್ದು, ಮದುವೆ ಮನೆಯವರ ಆತಂಕಕ್ಕೆ ಕಾರಣವಾಗಿತ್ತು.
ಕಾರ್ಕಳದ ಪರಿಸರದ ಜನರಿಂದ ಮಾಹಿತಿ ಪಡೆದ ಆಶಾ ಕಾರ್ಯಕರ್ತೆಯರು ಅಜೆಕಾರ್ ನಲ್ಲಿ ಮಂಗಳೂರಿಗೆ ಮದುವೆಗೆ ಹೋಗಿದ್ದ 8 ಮಂದಿಗೆ ಕ್ವಾರಂಟೈನ್ ವಿಧಿಸಲಾಗಿದೆ.