ವಿಟ್ಲ: ಮಹಿಳೆ ಮತ್ತು ಆಕೆಯ ಸ್ನೇಹಿತರ ತಂಡವೊಂದು ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ ನಡೆಸಿ 50 ಸಾವಿರ ರೂ. ಸುಲಿಗೆ ಮಾಡಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಟ್ಲ ದೇವಸ್ಥಾನದ ಒಳರಸ್ತೆಯಲ್ಲಿರುವ ಬಾಡಿಗೆ ಕಟ್ಟಡದ ಮಾಲಕರೊಬ್ಬರು ಹಣ ಕಳೆದುಕೊಂಡವರು ಎನ್ನಲಾಗಿದೆ. ಇವರನ್ನು ತನ್ನ ಕಟ್ಟಡದ ಮನೆಯಲ್ಲಿ ಬಾಡಿಗೆಗೆ ಇದ್ದ ಮಹಿಳೆಯೇ ಹನಿಟ್ರ್ಯಾಪ್ ನಡೆಸಿ ಹಣ ವಸೂಲಿ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ವಿಟ್ಲದ ಮೇಗಿನಪೇಟೆಯ ಶಾಮಿಯಾನ ಅಂಗಡಿಯೊಂದರಲ್ಲಿ ಕಾರ್ಮಿಕಳಾಗಿ ದುಡಿಯುತ್ತಿದ್ದ ಈ ಮಹಿಳೆ ಕೆಲವು ಸಮಯಗಳಿಂದ ವಿಟ್ಲ ಒಳರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಮನೆ ಮಾಲಕನನ್ನು ಮನೆಗೆ ಬರಮಾಡಿಕೊಂಡ ಮಹಿಳೆ ಬಳಿಕ ತನ್ನದೇ ಸಹಚರರಾಗಿದ್ದ ಒಂದಿಬ್ಬರು ಯುವಕರಲ್ಲಿ ಮನೆಗೆ ದಾಳಿ ಮಾಡಿಸಿದ್ದಾಳೆ. ಬಳಿಕ ಅದೇ ಯುವಕರ ಮಧ್ಯಸ್ಥಿಕೆಯಲ್ಲಿ ಪಂಚಾಯತಿಗೆ ನಡೆಸಿ ಮನೆ ಮಾಲಕನಿಂದ 50 ಸಾವಿರ ರೂ. ವಸೂಲಿ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಈ ವಿಚಾರ ಪ್ರಚಾರ ಪಡೆಯುತ್ತಿದ್ದಂತೆ ಯುವಕರು ಅದೇ ಮಹಿಳೆಯಲ್ಲಿ ಮನೆ ಮಾಲಕನ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ಅತ್ಯಾಚಾರ, ವಂಚನೆ ದೂರು ನೀಡಿಸಿದ್ದಾರೆ. ಮನೆ ಮಾಲಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಂತೆ ಮಹಿಳೆ ಮತ್ತು ಆಕೆಯ ತಂಡ ನಡೆಸಿದ ಹನಿಟ್ರ್ಯಾಪ್ ಬಯಲಾಗಿದ್ದ ಹಿನ್ನೆಲೆಯಲ್ಲಿ ಕಂಬಳೆಬೆಟ್ಟುವಿನ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.