ಕಡಬ: ಉಪ್ಪಿನಂಗಡಿ ಸಮೀಪದ ರಾಮಕುಂಜ ಎಂಬಲ್ಲಿ ಇತ್ತೀಚೆಗೆ ಎಸ್.ಬಿ.ಐ ಸೇವಾ ಕೇಂದ್ರ, ಮೊಬೈಲ್ ಅಂಗಡಿ, ಕಾಲೇಜು, ಪಂಚಾಯತ್‌ಗಳಲ್ಲಿ ಕಳ್ಳತನ ನಡೆಸಿದ ಕುಖ್ಯಾತ ಕಳ್ಳನನ್ನು ಕಡಬ ಎಸ್.ಐ.ರುಕ್ಮ ನಾಯ್ಕ್ ನೇತೃತ್ವದ ಪೋಲೀಸರ ತಂಡವು ಬಂಧಿಸಿದೆ.
ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ಸಜಿಪನಡು ಪೆರುವ ಮನೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಉಮ್ಮಾರ್ ಫಾರೂಕ್(27) ಎಂದು ಗುರುತಿಸಲಾಗಿದೆ.
ಈ ವ್ಯಕ್ತಿಯ ಮೇಲೆ ಕಡಬ ಸೇರಿದಂತೆ ವಿವಿಧ ಠಾಣೆಯಲ್ಲಿ ಒಟ್ಟು 16 ಪ್ರಕರಣಗಳು ದಾಖಲಾಗಿವೆ. ಕಳೆದ ಕೆಲವು ದಿನಗಳಿಂದ ಈತನ ಪತ್ತೆ ಕಾರ್ಯದಲ್ಲಿದ್ದ ಪೊಲೀಸರಿಗೆ, ಆತೂರು ಬಸ್ ನಿಲ್ದಾಣದಲ್ಲಿ ಈತ ಸೆರೆ ಸಿಕ್ಕಿದ್ದಾನೆ. ಈತನಿಂದ ಕಳ್ಳತನಕ್ಕೆ ಬಳಸಿದ ರಾಡ್ ಸೇರಿದಂತೆ ಕೆಲವು ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ರಾಮಕುಂಜದಲ್ಲಿ ಎಸ್.ಬಿ.ಐ. ಗ್ರಾಹಕರ ಸೇವಾ ಕೇಂದ್ರ, ಮೊಬೈಲ್ ಅಂಗಡಿ, ಪಂಚಾಯತ್ ಹಾಗೂ ಕಾಲೇಜಿನ ಬೀಗ ಮುರಿದು ಕಳ್ಳತನ ನಡೆಸಿದ್ದು, ಈ ಕೃತ್ಯದಲ್ಲಿ ಈತ ಹಾಗೂ ಇನ್ನೋರ್ವ ಫಯಾನ್ ಎಂಬಾತ ಪಾಲ್ಗೊಂಡಿದ್ದರು. ಫಯಾನ್ ನನ್ನು ಈಗಾಗಲೇ ಕೊಣಾಜೆ ಠಾಣೆಯ ಪೊಲೀಸರು ಬಂಧಿಸಿ ಆತ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಉಮ್ಮಾರ್ ಫಾರೂಕ್ ವಿರುದ್ಧ ಈಗಾಗಲೇ ಕಡಬ ಠಾಣೆಯಲ್ಲಿ-4, ಉಪ್ಪಿನಂಗಡಿ ಠಾಣೆಯಲ್ಲಿ-2, ಬಂಟ್ವಾಳ ಠಾಣೆಯಲ್ಲಿ-3, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ-2, ಕೊಣಾಜೆ ಠಾಣೆಯಲ್ಲಿ-5 ಸೇರಿದಮತೆ ಒಟ್ಟು 16 ಪ್ರಕರಣ ದಾಖಲಾಗಿದೆ. ಹಣದ ಉದ್ದೇಶದಿಂದ ಕಳ್ಳತನಕ್ಕೆ ಸರ್ಕಾರಿ ಕಚೇರಿ, ಮೊಬೈಲ್ ಅಂಗಡಿಗಳನ್ನೇ ಕಳ್ಳತನಕ್ಕೆ ಆಯ್ಕೆ ಮಾಡಿಕೊಳ್ಳುವ ಚಾಳಿ ಹೊಂದಿರುವುದಾಗಿ ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.