
ಕಡಬ: ಕಾರಿಗೆ ಲಾರಿ ಡಿಕ್ಕಿ ಹೊಡೆದು ವೃದ್ಧೆಯೊಬ್ಬರು ಸಾವನ್ನಪ್ಪಿ, ಮಹಿಳೆಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪ ನಡೆದಿದೆ. ಘಟನೆಯ ಬಳಿಕ ಲಾರಿ ನಿಲ್ಲಿಸಿದೇ ಚಾಲಕ ಪರಾರಿಯಾಗಿದ್ದಾನೆ.
ಉಡುಪಿ ಜಿಲ್ಲೆಯ ಸಾಲಿಗ್ರಾಮ ಗ್ರಾಮದ ಕಾರ್ಕಡ ನಿವಾಸಿ ವಾಗ್ದೇವಿ (77) ಮೃತ ದುರ್ದೈವಿ. ಗಂಭೀರವಾಗಿ ಗಾಯಗೊಂಡಿರುವ ವರಲಕ್ಷ್ಮಿ ಅವರು ಉಡುಪಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದ ಇತರ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.
ಸಂಜೀವಿನಿ ಮಯ್ಯ ಅವರು ತಮ್ಮ ತಾಯಿ ವಾಗ್ದೇವಿ, ತಂಗಿ ವರಲಕ್ಷ್ಮಿ ಹಾಗೂ ತಂಗಿಯ ಮಗ ಪಾರ್ಥೇಶ್ ಅವರೊಂದಿಗೆ ಗುರುರಾಜ್ ಚಾಲನೆ ಮಾಡುತ್ತಿದ್ದ ಕಾರಿನಲ್ಲಿ ಧರ್ಮಸ್ಥಳ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನಕ್ಕಾಗಿ ಪ್ರವಾಸ ಹಮ್ಮಿಕೊಂಡಿದ್ದರು. ಬುಧವಾರ ಬೆಳಿಗ್ಗೆ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮುಗಿಸಿ, ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಕಾರು ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪ ತಲುಪುತ್ತಿದ್ದಂತೆ, ಎದುರಿನಿಂದ ಅಂದರೆ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಅತ್ಯಂತ ವೇಗವಾಗಿ ಬರುತ್ತಿದ್ದ ಅಪರಿಚಿತ ಲಾರಿಯೊಂದು ಚಾಲಕನ ನಿರ್ಲಕ್ಷ್ಯದಿಂದ ಹೆದ್ದಾರಿಯ ತಪ್ಪು ಬದಿಗೆ (ರಸ್ತೆಯ ಬಲಭಾಗಕ್ಕೆ) ನುಗ್ಗಿ ಇವರ ಕಾರಿಗೆ ಮುಖಾಮುಖಿ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯ ಎಡಭಾಗದ ಹಳ್ಳಕ್ಕೆ ಉರುಳಿ ಬಿದ್ದಿದ್ದು, ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ವಾಗ್ದೇವಿ ಅವರಿಗೆ ತಲೆ, ಬೆನ್ನು ಹಾಗೂ ಕಾಲಿಗೆ ತೀವ್ರ ರಕ್ತಗಾಯಗಳಾಗಿದ್ದು, ವರಲಕ್ಷ್ಮಿ ಅವರ ಸೊಂಟದ ಭಾಗಕ್ಕೆ ಗಂಭೀರ ಪೆಟ್ಟಾಗಿತ್ತು. ಅಪಘಾತ ನಡೆದ ತಕ್ಷಣ ಸ್ಥಳೀಯ ಸಾರ್ವಜನಿಕರು , ವಾಹನ ಸವಾರರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಗಾಯಾಳುಗಳನ್ನು ಕಾರಿನಿಂದ ಹೊರತೆಗೆದು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ವೈದ್ಯರ ತುರ್ತು ಸಲಹೆ ಮೇರೆಗೆ ವಾಗ್ದೇವಿ ಹಾಗೂ ವರಲಕ್ಷ್ಮಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ಮೂಲಕ ತವರೂರಾದ ಉಡುಪಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ತಲೆಗೆ ಬಿದ್ದ ಪೆಟ್ಟು ತೀವ್ರವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನದ ವೇಳೆ ವಾಗ್ದೇವಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಲಾರಿ ಚಾಲಕನ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದೆ. ಪೊಲೀಸರು ಹೆದ್ದಾರಿಯ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಪರಾರಿಯಾದ ಲಾರಿ ಮತ್ತು ಚಾಲಕನ ಪತ್ತೆಗಾಗಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.


