Wednesday, June 24, 2026
Homeಕರಾವಳಿಮಂಗಳೂರುಕಡಬ: ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಳ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ: ಓರ್ವ ಮಹಿಳೆ ಸ್ಥಳದಲ್ಲೇ ಸಾವು,...

ಕಡಬ: ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಳ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ: ಓರ್ವ ಮಹಿಳೆ ಸ್ಥಳದಲ್ಲೇ ಸಾವು, ಏಳು ಮಂದಿಗೆ ಗಂಭೀರ ಗಾಯ

- Advertisement -
- Advertisement -

ಕಡಬ: ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಳ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ  ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿ, ಏಳು ಮಂದಿಗೆ ಗಂಭೀರ ಗಾಯಗಳಾಗಿವೆ. ಚಿಕ್ಕಬಳ್ಳಾಪುರ ತಾಲೂಕಿನ ಕೆರೆಸಂದ್ರಮನೆ ನಿವಾಸಿ ಆಂಜನಮ್ಮ (47) ಮೃತ ದುರ್ದೈವಿ.

ದೇವನಹಳ್ಳಿಯಿಂದ ಹೊರಟಿದ್ದ ಯಾತ್ರಾರ್ಥಿಗಳ ತಂಡವು ಹೊರನಾಡು, ಶೃಂಗೇರಿ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿತ್ತು. ಮೇ 25ರಂದು ಬೆಳಗ್ಗೆ ಸೌತಡ್ಕ ಕ್ಷೇತ್ರಕ್ಕೆ ಭೇಟಿ ನೀಡಿ, ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೆಂಗಳೂರಿನತ್ತ ಮರಳುತ್ತಿದ್ದರು. ಬೆಂಗಳೂರು ದೇವನಹಳ್ಳಿ ಕೋಟೆ ನಿವಾಸಿ ಸಂಜು ವಿ. ಅವರು ಚಲಾಯಿಸುತ್ತಿದ್ದ ಟೆಂಪೋ ಟ್ರಾವೆಲ್ಲರ್ (ಕೆಎ 43 ಎ 6435) ವಾಹನದಲ್ಲಿ ಒಟ್ಟು 14 ಮಂದಿ ಇದ್ದರು. ಧರ್ಮಸ್ಥಳ ಕಡೆಯಿಂದ ಸುಬ್ರಹ್ಮಣ್ಯದತ್ತ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಡುವೆ ಕೆಂಜಳದ ಅಪಾಯಕಾರಿ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ.

ಅಪಘಾತದ ತೀವ್ರತೆಗೆ ಟೆಂಪೋ ಟ್ರಾವೆಲ್ಲರ್‌ನಲ್ಲಿದ್ದ 5 ವರ್ಷದ ಬಾಲಕಿ ನಯಾನಿಕಾ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ನರಸಿಂಹಯ್ಯ, ವಿ. ಮಂಜುನಾಥ, ವಿ. ಗಂಗಾಧರ, ಪವಿತ್ರಾ, ಸಿರಿಪ್ರಿಯಾ ಹಾಗೂ ರತ್ನಮ್ಮ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಲೋಕೇಶ್ ದೇವನಹಳ್ಳಿ, ಪವನ್ ಸೋಮನಹಳ್ಳಿ ಕನಕಪುರ, ಕವಿತಾ ಸಿ.ಎಂ., ಜೀವನ್, ಆಶಾ, ಪ್ರೀತಮ್ ಹಾಗೂ ಶಿವ ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.ಮೃತ ಆಂಜನಮ್ಮ ಅವರ ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!