ಮಂಗಳೂರು : ಸುರತ್ಕಲ್ ಕಾನ ಕುಳಾಯಿ ರೈಲ್ವೆ ಸೇತುವೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಕೂಡಲೇ ದುರಸ್ಥಿ ಮಾಡಬೇಕು ಎಂದು ಒತ್ತಾಯಿಸಿ ಡಿವೈಎಫ್‌ಐ ಕಾನ ಮತ್ತು ಕುಳಾಯಿ ಘಟಕಗಳ ನೇತೃತ್ವದಲ್ಲಿ ಕುಳಾಯಿ ರೈಲ್ವೆ ಸೇತುವೆಯ ಮೇಲೆ ರಸ್ತೆತಡೆಯೊಂದಿಗೆ ಪ್ರತಿಭಟನೆ ನಡೆಸಲಾಯಿತು.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಪಾಲಿಕೆ ಅಧಿಕಾರಿಗಳ ಮತ್ತು ಜನಪ್ರತಿನಿದಿನಗಳ ನಿರ್ಲಕ್ಷ್ಯತನದಿಂದಾಗಿ ರೈಲ್ವೆ ಸೇತುವೆ ಸಂಪೂರ್ಣಹಾಳಾಗಿ ಹೋಗಿದೆ.ಅವೈಜ್ಞಾನಿಕ ರಸ್ತೆ ನಿರ್ಮಾಣ ಮಾಡಿ ಡಿವೈಡರ್ ಹಾಕುವಲ್ಲಿ ಇಂಟರ್ ಲಾಕ್ ಅಳವಡಿಸಿರುವುದರಿಂದ ದ್ವಿಚಕ್ರ ಸವಾರರು ನಿಯಂತ್ರಣ ತಪ್ಪಿಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಧೂಳು ಮತ್ತು ಕೆಸರಿನಿಂದ ಜನ ನಡೆದಾಡಲು ಆಗದ ಸ್ಥಿತಿ ತಲುಪಿದೆ. ಕ್ಷೇತ್ರದ ಶಾಸಕರು ಮತ್ತು ಕಾರ್ಪೊರೇಟರ್ ಮೂಲಭೂತ ಸಮಸ್ಯೆ ಬಗೆಹರಿಸುವ ಬದಲು ಜನರನ್ನು ಭಾವನಾತ್ಮಕವಾಗಿ ವಿಂಗಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು .
ಇನ್ನು ಎರಡು ವಾರದೊಳಗೆ ಸೇತುವೆ ದುರಸ್ಥಿ ಆಗದಿದ್ದರೆ ನಗರ ಪಾಲಿಕೆಯ ವಲಯ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು. ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿದರು. ಕಾನ ಕುಳಾಯಿ ಘಟಕದ ಪ್ರಮುಖರಾದ ಮುಹಮ್ಮದ್, ಜೋಯ್, ಮುಸ್ತಫಾ ಅಂಗರಗುಂಡಿ, ನವಾಬ್ ಕುಳಾಯಿ, ಇಮ್ತಿಯಾಝ್ ಕುಳಾಯಿ, ಲಕ್ಷ್ಮೀಶ ಕುಳಾಯಿ, ಸಮದ್, ರಿಯಾಝ್ ದಾಜ್, ಅನ್ವರ್ ಆಲಿ, ಹಂಝ ಮೈಂದಗುರಿ ನೇತೃತ್ವ ವಹಿಸಿದ್ದರು.ಸುರತ್ಕಲ್ ಘಟಕದ ಕಾರ್ಯದರ್ಶಿ ಶ್ರೀನಾಥ್ ಕುಲಾಲ್ ಸ್ವಾಗತಿಸಿದರು. ಅಧ್ಯಕ್ಷ ಬಿ.ಕೆ. ಮಸೂದ್ ವಂದಿಸಿದರು.