
abbs studios ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್. ಬಾಬಿ ನಿರ್ಮಿಸಿರುವ, ಸಿ.ಆರ್.ಬಾಬಿ ನಿರ್ದೇಶನದಲ್ಲಿ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ‘ಜಸ್ಟ್ ಮ್ಯಾರೀಡ್’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ರಿಷಬ್ ಶೆಟ್ಟಿ ಆನ್ ಲೈನ್ ಮೂಲಕ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
‘ಜಸ್ಟ್ ಮ್ಯಾರೀಡ್’ ಚಿತ್ರದ ಮೂಲಕ ಅಜನೀಶ್ ಮೊದಲ ಬಾರಿಗೆ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಇದಕ್ಕೆ ಕಾರಣ ಹೇಳಿದ ಅವರು, ‘ನಾನು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ನೆರವಾಗಿ ನಿಂತ ಸಿ.ಆರ್ ಬಾಬಿ ಅವರಿಗೆ ಚಿತ್ರ ನಿರ್ದೇಶನ ಮಾಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ನಾನು ಕೂಡ ಚಿತ್ರ ನಿರ್ದೇಶನ ಮಾಡಿ ಅಂತ ಹೇಳುತ್ತಿದ್ದೆ. ಆದರೆ, ಈಗ ಕಾಲ ಕೂಡಿ ಬಂದಿದೆ’ ಎಂದರು.
ಈ ಚಿತ್ರದ ಹಾಡುಗಳು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿವೆ. ಚಿತ್ರ ವೀಕ್ಷಣೆ ಮಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ವಿ.ಕೆ ಫಿಲಂಸ್ ಮೂಲಕ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಆಗಸ್ಟ್ 22ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಶ‍್ರುತಿ, ಮಾಳವಿಕಾ ಅವಿನಾಶ್, ಶ್ರೀಮಾನ್, ವಾಣಿ ಹರಿಕೃಷ್ಣ, ಅಭಿನವ್, ವೇದಿಕಾ, ನೃತ್ಯ ನಿರ್ದೇಶಕಿ ಶಾಂತಿ ಮಾಸ್ಟರ್, ಜಸ್ಕರಣ್ ಸಿಂಗ್ ಮುಂತಾದವರು ಹಾಜರಿದ್ದರು.


