ಉಪ್ಪಿನಂಗಡಿ: ಹೃದಯಾಘಾತದಿಂದ ಮೃತಪಟ್ಟ ಭಾರತೀಯ ಸೇನೆಯ ಯೋಧ ಸಂದೇಶ್ ಶೆಟ್ಟಿ(34)ಯವರ ಪಾರ್ಥಿವ ಶರೀರ ತವರೂರಾದ ಬಾರ್ಯ ಗ್ರಾಮದ ನಿವಾಸಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಜೋಗಿಬೆಟ್ಟು ರಿಫಾಯಿ ಜುಮಾ ಮಸೀದಿಯ ಎದುರು ಮಸೀದಿಯ ಅಧ್ಯಕ್ಷರ ಸಮ್ಮುಖದಲ್ಲಿ ರಾಷ್ಟ್ರಧ್ವಜ ಹಿಡಿದು ಅಂತಿಮ ನಮನ ಸಲ್ಲಿಸಲಾಯಿತು.
ಬೆಂಗಳೂರಿನಿಂದ ಉಪ್ಪಿನಂಗಡಿಯ ನೆಲ್ಯಾಡಿವರೆಗೆ ಮಿಲಿಟರಿ ವಾಹನದಲ್ಲಿ ಪಾರ್ಥೀವ ಶರೀರವನ್ನು ತರಲಾಯಿತು. ಬಳಿಕ, ನೆಲ್ಯಾಡಿಯಿಂದ ಯೋಧನ ಹುಟ್ಟೂರಾದ ಬಾರ್ಯಕ್ಕೆ ತೆರೆದ ವಾಹನದಲ್ಲಿ ಅಂತಿಮ ಯಾತ್ರೆ ನಡೆಯಿತು. ಅಂತಿಮ ಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಯೋಧ ಸಂದೇಶ್ ಪಾರ್ಥೀವ ಶರೀರಕ್ಕೆ ಗೌರವ ಸೂಚಿಸಿದರು.
ಯೋಧನ ಪಾರ್ಥೀವ ಶರೀರವನ್ನು ಹುಟ್ಟೂರಿನ ಸ.ಹಿ.ಪ್ರಾ.ಶಾಲೆ ಪೇರಿಯೊಟ್ಟುನಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಈ ವೇಳೆ, ಸೇನೆಯ ಅಧಿಕಾರಿಗಳಿಂದ ಸೇನಾ ಗೌರವ ಹಾಗೂ ಸಕಲ ಸರಕಾರಿ ಗೌರವಗಳನ್ನು ಸಲ್ಲಿಸಲಾಯಿತು.
ರಜೆಯ ನಿಮಿತ್ತ ಊರಿಗೆ ಬಂದಿದ್ದ ಇವರು ಕಳೆದ ವಾರವಷ್ಟೇ ಕರ್ತವ್ಯಕ್ಕೆಂದು ಉತ್ತರ ಪ್ರದೇಶದ ಮಥುರಾಕ್ಕೆ ತೆರಳಿದ್ದರು. ಅಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಇದ್ದ ಇವರು ಹೃದಯಾಘಾತವಾಗಿ ನಿಧನ ಹೊಂದಿದ್ದಾರೆನ್ನಲಾಗಿದೆ.
ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಯೋಧನ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸೈನಿಕನೊಬ್ಬನನ್ನು ಕಳೆದುಕೊಂಡರೆ ಮನೆಯ ಒಬ್ಬ ಮಗನನ್ನು ಕಳೆದುಕೊಂಡಂತೆ. ಯೋಧ ಸಂದೇಶ್ ಶೆಟ್ಟಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಪ್ರಾಣಾರ್ಪಣೆ ಮಾಡಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸಿದರು.


