
ನವದೆಹಲಿ: ಇಂಡಿಗೋ ಸೇರಿ ದೇಶದ ಹಲವು ವಿಮಾನಗಳ ಹಾರಾಟದಲ್ಲಿ ಭಾರೀ ವಿಳಂಬ ಮತ್ತು ರದ್ದತಿ ಉಂಟಾಗಿದೆ. ಸಿಬ್ಬಂದಿಗಳ ಸಾಮೂಹಿಕ ಅನಾರೋಗ್ಯ ರಜೆಯೇ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಹೇಳಲಾಗಿದ್ದು, ಹಲವು ವಿಮಾನಗಳ ಹಾರಾಟ ಗಂಟೆಗಟ್ಟಲೆ ವಿಳಂಬಗೊಂಡು ನೂರಾರು ವಿಮಾನಗಳ ಹಾರಾಟವೇ ರದ್ದುಗೊಂಡಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ 2024 ರ ಜನವರಿಯಿಂದ ಕಟ್ಟುನಿಟ್ಟಾಗಿ ಜಾರಿಗೆ ತಂದಿರುವ ಹೊಸ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಶನ್ ನಿಯಮಗಳೇ ಬಿಕ್ಕಟ್ಟಿಗೆ ಮೂಲ ಕಾರಣ ಎನ್ನಲಾಗಿದೆ.
ಹೊಸ ನಿಯಮದ ಪ್ರಕಾರ ಪೈಲಟ್‌ಗಳ ವಾರದ ಕರ್ತವ್ಯ ಸಮಯ 5ರಿಂದ 10 ಗಂಟೆಗಳಷ್ಟು ಕಡಿತಗೊಂಡಿದ್ದು, ರಾತ್ರಿ ಡ್ಯೂಟಿಉ ನಂತರ ಕನಿಷ್ಠ 48 ಗಂಟೆ ವಾರಾಂತ್ಯ ವಿಶ್ರಾಂತಿ ಕಡ್ಡಾಯಗೊಳಿಸಲಾಗಿದೆ.
ಒಂದೇ ದಿನದಲ್ಲಿ ಗರಿಷ್ಠ ಲ್ಯಾಂಡಿಂಗ್ ಸಂಖ್ಯೆಯ ಮಿತಿ ಕಟ್ಟುನಿಟ್ಟಾಗಿದ್ದು, ಸಿಬ್ನಂದಿಗಳ ಕೊರತೆ ಇದ್ದರೂ ವಿಮಾನಯಾನ ಸಂಸ್ಥೆಗಳು ನೇಮಕ ಮಾಡಿಕೊಳ್ಳದೇ ಇದ್ದ ಕಾರಣ ಬಿಕ್ಕಟ್ಟು ಸೃಷ್ಟಿಯಾಗಿದೆ.
ಇಂಡಿಗೋ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಅಕಾಸಾ ಸೇರಿದಂತೆ ವಿಮಾನಯಾನ ಕಂಪನಿಗಳ ಮೇಲೆ ಒತ್ತಡ ಸೃಷ್ಟಿಯಾಗಿದ್ದು, ನಿಯಮ ಉಲ್ಲಂಘಿಸಿದರೆ ಭಾರೀ ದಂಡದ ಜೊತೆಗೆ ಲೈಸೆನ್ಸ್ ರದ್ದುಗೊಳ್ಳುವ ಸಾಧ್ಯತೆ ಇದೆ.
ಇಂದು 200ಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ರದ್ದಾಗಿದ್ದು, ಇದರಿಂದಾಗಿ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ


