ಸುರತ್ಕಲ್ ಟೋಲ್ ಗೇಟ್ ತೆರವಿಗೆ ಇದೀಗ ಹಗಲು ರಾತ್ರಿಯ ಅನಿರ್ಧಾಷ್ಟಾವಧಿ ಧರಣಿ ಪ್ರಾರಂಭವಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಟೋಲ್ ಗೇಟ್ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಜಮಾಯಿಸಿದ ಹೋರಾಟ ಸಮಿತಿ ಮುಖಂಡರು, ಸದಸ್ಯರು ಟೋಲ್ ಮುಂಭಾಗದಲ್ಲಿ ಧರಣಿ ಕುಳಿತಿದ್ದಾರೆ.
ವಾರಗಳ ಹಿಂದಷ್ಟೇ ನಡೆದಿದ್ದ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತೆರಳಿ ಸಾಕಷ್ಟು ಹೈಡ್ರಾಮಕ್ಕೆ ಕಾರಣವಾಗಿತ್ತು. ಟೋಲ್ ಪ್ಲಾಜಾಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು. ಇದೀಗ ಮತ್ತೆ ಟೋಲ್‌ಗೇಟ್ ತೆರವಿಗೆ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭವಾಗಿದೆ. ಸಂಸದ ನಳೀನ್ ಕುಮಾರ್ ಕಟೀಲ್ ನವೆಂಬರ್ 7ರವರಗೆ ಕಾಲಾವಕಾಶ ಕೇಳಿದ್ದು ಆ ಬಳಿಕವೂ ಟೋಲ್ ಗೇಟ್ ತೆರವು ಆಗದಿದ್ದರೆ ಹೋರಾಟದ ಸ್ವರೂಪ ಬದಲಾಗುತ್ತೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.
ಡಿವೈ ಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ, ಬಿ.ಕೆ.ಇಮ್ತಿಯಾಜ್, ಮಾಜಿ ಸಚಿವ ರಮಾನಾಥ್ ರೈ, ರಾಘವೇಂದ್ರ ರಾವ್, ಎಂ. ಜಿ. ಹೆಗಡೆ, ಮಾಜಿ ಸಚಿವ ಅಭಯಂಚಂದ್ರ ಜೈನ್, ಪುರುಷೋತ್ತಮ್ ಚಿತ್ರಾಪುರ, ಮಾಜಿ ಶಾಸಕ ಮೊಯಿದೀನ್ ಬಾವಾ, ದಿನೇಶ್ ಹೆಗ್ಡೆ ಉಳೆಪಾಡಿ, ಹಯಾಜ್, ಮಂಜುಳಾ ನಾಯಕ್ ಮತ್ತಿತರರು ಧರಣಿ ಕುಳಿತಿದ್ದಾರೆ.