ಕುಂದಾಪುರ: ಶಿರಾಡಿ, ಆಗುಂಬೆ ಘಾಟಿ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತ ಆಗಿರುವುದರಿಂದ ಇತರ ಘಾಟಿ ರಸ್ತೆಗಳ ಮೇಲೆ ವಾಹನಗಳ ಸಂಚಾರದ ಒತ್ತಡ ಹೆಚ್ಚುತ್ತಿದೆ. ಕೊಲ್ಲೂರು, ನಿಟ್ಟೂರು ಸಮೀಪದ ನಾಗೋಡಿ ಘಾಟಿಯಲ್ಲೂ ವಾಹನಗಳ ಸಂಚಾರ ಹೆಚ್ಚಾಗಿದ್ದು, ಅಲ್ಲಲ್ಲಿ ಕುಸಿಯುವ ಭೀತಿ ಆರಂಭವಾಗಿದೆ.
ಹಲವು ಮರಗಳು ರಸ್ತೆಗೆ ಬೀಳುವ ಅಪಾಯದಲ್ಲಿದ್ದರೆ, ಈಗಾಗಲೇ ರಸ್ತೆಗೆ ಬಿದ್ದ ಮರಗಳನ್ನು ತೆರವು ಮಾಡದಿರುವುದೂ ಕಂಡುಬರುತ್ತಿದೆ. ಪ್ರಮುಖ ಧಾರ್ಮಿಕ ಕೇಂದ್ರಗಳಾದ ಕೊಲ್ಲೂರು ಹಾಗೂ ಸಿಗಂದೂರನ್ನು ಸಂಪರ್ಕಿಸುವ ಪ್ರಮುಖ ಮಾರ್ಗ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ.
14 ಕಿ.ಮೀ. ವ್ಯಾಪ್ತಿ ಯಲ್ಲಿ ಘಾಟಿ ರಸ್ತೆಯಿದ್ದು 7 ಕಿ.ಮೀ. ಕಾಂಕ್ರೀಟ್, ಬಾಕಿ 7 ಕಿ.ಮೀ. ಡಾಂಬರು. ರಸ್ತೆ ಉತ್ತಮವಾಗಿದ್ದರೂ ನಿರಂತರ ಮಳೆಯಾಗುತ್ತಿರುವುದರಿಂದ ಘಾಟಿ ಭಾಗವು ಜರ್ಝರಿತವಾಗಿ ಅಲ್ಲಲ್ಲಿ ಗುಡ್ಡ ಕುಸಿಯುವ ಭೀತಿ ಎದುರಿಸುತ್ತಿದೆ. ಕಾಂಕ್ರೀಟ್ ರಸ್ತೆಯ ಎರಡೂ ಬದಿ ಜಾರುತ್ತಿದೆ. ರಸ್ತೆಗೆಬಾಗಿರುವ ಮರಗಳು ಅಪಾಯಕಾರಿಯಾಗಿದ್ದು ವಾಹನಗಳನ್ನು ಚಲಾಯಿಸುವುದು ಕಷ್ಟ ಎನಿಸುತ್ತಿದೆ. ರಾತ್ರಿಯಲ್ಲಂತೂ ಜೀವಭಯದಲ್ಲೇ ಸಂಚರಿಸುವಂತಾಗಿದೆ. ಘಾಟಿಯ ಮೇಲ್ಬಾಗದಲ್ಲಿ ನಾಗೋಡಿ ಹೊಳೆಗೆ 3.75 ಕೋ.ರೂ. ವೆಚ್ಚದಲ್ಲಿ 92 ಮೀ. ಉದ್ದ, 9ಮೀ. ಅಗಲ, 12 ಮೀ. ಎತ್ತರದ ತಡೆಗೋಡೆ ನಿರ್ಮಿಸುತ್ತಿದ್ದು ಅರ್ಧಂ ಬರ್ಧ ಕಾಮಗಾರಿಯಾಗಿದೆ. ತಡೆ ಗೋಡೆಯ ಒಂದು ಬದಿ ಕುಸಿದಿದೆ. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.