ಬಂಟ್ವಾಳ: ತಾಲ್ಲೂಕಿನ ಅರಳ ಮತ್ತು ಮಂಗಳೂರು ತಾಲ್ಲೂಕಿನ ಮುತ್ತೂರು ಗ್ರಾಮದ ನಡುವೆ ಸಂಪರ್ಕ ಕಲ್ಪಿಸುವ ಮುಲಾರಪಟ್ನ ಸೇತುವೆಯು ಮೂರು ವರ್ಷಗಳ ಬಳಿಕ ಪುನರ್ ನಿರ್ಮಾಣಗೊಂಡಿದೆ. ಇಲ್ಲಿನ ಫಲ್ಗುಣಿ ನದಿಗೆ ಅಡ್ಡವಾಗಿ ₹13.90 ಕೋಟಿ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಸೇತುವೆಯು ಇಂದಿನಿಂದ ಸಾರ್ವಜನಿಕರ ಬಳಕೆಗೆ ಸಿದ್ಧವಾಗಿದೆ .
ಶುಕ್ರವಾರ ಬೆಳಿಗ್ಗೆ 10 ಗಂಟೆಯ ಬಳಿಕ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮತ್ತು ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ವೈ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ಮತ್ತು ಬಂಟ್ವಾಳ ತಾಲ್ಲೂಕು ಸಂಪರ್ಕಿಸಲು ಪ್ರಮುಖ ಕೊಂಡಿಯಾಗಿದ್ದ ಈ ಸೇತುವೆ ಮೂರು ವರ್ಷಗಳ ಹಿಂದೆ ಕುಸಿದಿತ್ತು. ಈ ಸೇತುವೆಯನ್ನೇ ಅವಲಂಬಿಸಿದ್ದ ಮುತ್ತೂರು ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಗ್ರಾಮಸ್ಥರು ತೊಂದರೆ ಅನುಭವಿಸಿದ್ದರು. ತೂಗುಸೇತುವೆಯನ್ನೇ ನದಿ ದಾಟಲು ಅವಲಂಬಿಸಿದ್ದರು. ಈ ನಡುವೆ ಸತತ ಎರಡು ವರ್ಷ ಬೇಸಿಗೆಯಲ್ಲಿ ಜಿ.ಎಚ್.ಎಂ.ಸಂಘಟನೆ ವತಿಯಿಂದ ಸ್ಥಳೀಯ ಯುವಕರು ಶ್ರಮದಾನದ ಮೂಲಕ ನದಿಯಲ್ಲಿ ಮಣ್ಣು ಹಾಕಿ ತಾತ್ಕಾಲಿಕ ‘ಸಂಪರ್ಕ ಸೇತು’ ನಿರ್ಮಿಸುವ ಮೂಲಕ ಗಮನ ಸೆಳೆದಿದ್ದರು.
ಸೇತುವೆ ಇಲ್ಲದ ಕಾರಣ ಬಿ.ಸಿ.ರೋಡಿನಿಂದ ಮುಲಾರಪಟ್ನ ಮತ್ತು ಮಂಗಳೂರಿನಿಂದ ಮುತ್ತೂರು ತನಕ ಮಾತ್ರ ಸರ್ಕಾರಿ ಬಸ್ ಸಂಚಾರ ನಡೆಸುತ್ತಿತ್ತು. ಕುಪ್ಪೆಪದವು, ಪೊಳಲಿ, ಗಂಜಿಮಠ, ಸೋರ್ಣಾಡು, ಸಿದ್ಧಕಟ್ಟೆ, ಲೊರೆಟ್ಟೊ ಮತ್ತಿತರ ಪ್ರದೇಶಗಳಿಗೆ ಹೋಗಬೇಕಾದ ವಾಹನಗಳು ಕುರಿಯಾಳ, ಸಾಣೂರುಪದವು, ಮೂಡುಬಿದ್ರೆ ರಸ್ತೆ ಮೂಲಕ ಸುತ್ತಿ ಬಳಸಿ ಸಂಚರಿಸಬೇಕಾಗಿತ್ತು. ಎರಡು ತಾಲ್ಲೂಕುಗಳನ್ನು ಸಂಪರ್ಕಿಸುವ ಈ ಸೇತುವೆಯ ಕಾಮಗಾರಿ ಮೂರು ವರ್ಷವಾದರೂ ಪೂರ್ಣಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದರು. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಜಿಲ್ಲೆಗೆ ಬರಲಿದ್ದು, ಅವರು ಸೇತುವೆ ಉದ್ಘಾಟಿಸುವರು ಎಂದು ಸಂಸದ ನಳಿನ್ ಕುಮಾರ್ ಕಟೀಲು ಘೋಷಿಸಿದ್ದರು.


