
ಉಳ್ಳಾಲ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮುಂಗಾರು ಮಳೆಗೆ ತೊಕ್ಕೊಟ್ಟು ಸಮೀಪದ ಕೆರೆಬೈಲ್‌ನಲ್ಲಿ ಎಸ್ಟೇಟ್ ಒಂದರ ಎತ್ತರದ ಆವರಣ ಗೋಡೆ ಕುಸಿದು ಬಿದ್ದು, ಪಕ್ಕದ ಒಂಟಿ ಮನೆಯೊಂದು ಸಂಪೂರ್ಣವಾಗಿ ನೆಲಸಮಗೊಂಡಿದೆ.
ಕೆರೆಬೈಲ್ ಗುಡ್ಡೆಯ ನಿವಾಸಿ ಕಿಶೋರ್ ಎಂಬುವವರಿಗೆ ಸೇರಿದ ಈ ಮನೆಯಲ್ಲಿದ್ದ ಐವರು ಸದಸ್ಯರು, ಅಪಾಯದ ಮುನ್ಸೂಚನೆ ಅರಿತು ಎರಡು ವಾರಗಳ ಹಿಂದಷ್ಟೇ ಬೇರೆಡೆಗೆ ಸ್ಥಳಾಂತರಗೊಂಡಿದ್ದರಿಂದ ಭೀಕರ ದುರಂತವೊಂದು ತಪ್ಪಿದಂತಾಗಿದೆ.
ಕಳೆದ ವರ್ಷವೇ ಈ ಐಷಾರಾಮಿ ಎಸ್ಟೇಟ್‌ನ ಬೃಹತ್ ಆವರಣ ಗೋಡೆ ಕಿಶೋರ್ ಅವರ ಮನೆಯ ಕಡೆಗೆ ವಾಲಿ ನಿಂತಿತ್ತು. ಈ ಬಗ್ಗೆ ಕಿಶೋರ್ ಅವರು ನೀಡಿದ ದೂರಿನ ಮೇರೆಗೆ ಉಳ್ಳಾಲ ನಗರಸಭೆ ಅಧಿಕಾರಿಗಳು ಮುಂಜಾಗೃತಾ ಕ್ರಮವಾಗಿ ಕಿಶೋರ್ ಅವರ ಕುಟುಂಬ ಸೇರಿದಂತೆ ಸುತ್ತಮುತ್ತಲಿನ ಹತ್ತು ಮನೆಗಳನ್ನು ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಿದ್ದರು. ಹೀಗೆ ಅಧಿಕಾರಿಗಳು ಮತ್ತು ಸ್ಥಳೀಯರು ಸಕಾಲದಲ್ಲಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮದಿಂದಾಗಿ ಇಂದು ಭಾರಿ ಪ್ರಾಣಾಪಾಯವೊಂದು ಸೃಷ್ಠಿಯಾಗುವುದು ತಪ್ಪಿದೆ.


