ಬೆಳ್ತಂಗಡಿ: ಇಲ್ಲಿನ ಮಲವಂತಿಗೆ ಗ್ರಾಮದ ಎಳನೀರು ಪರಿಸರದ ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿ 30 ಲಕ್ಷ ಕ್ಕು ಅಧಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಈ ಘಟನೆಯು ಇಲ್ಲಿನ ಪ್ರಶಾಂತ್ ವೈ.ಆರ್ ಎನ್ನುವವರ ಮನೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಮನೆಯಲ್ಲಿದ್ದ ಸುಮಾರು 2 ಲಕ್ಷ ರೂ. ಮೊತ್ತದ ಅಡಕೆ, ಒಂದು ಲಕ್ಷ ರೂ. ಮೌಲ್ಯದ ಕಾಫಿ ಬೀಜ, 50 ಸಾವಿರ ರೂ. ಮೊತ್ತದ ಕಾಳು ಮೆಣಸು, ಬಟ್ಟೆ ಬರೆ, ಪಾತ್ರೆ, ದಾಖಲೆ ಇತ್ಯಾದಿಗಳು ಸುಟ್ಟು ನಾಶವಾಗಿವೆ.
ಇನ್ನು ಮನೆಯಲ್ಲಿದ್ದವರು ನೆರೆಮನೆಯಲ್ಲಿದ್ದ ಪರಿಣಾಮ ಜೀವಹಾನಿಯಿಂದ ಪಾರಾಗಿದ್ದು, ಸಂಪೂರ್ಣವಾಗಿ ಮನೆ ಸುಟ್ಟು ಹೋದ ಪರಿಣಾಮ, ಸದ್ಯಕ್ಕೆ ಇವರಿಗೆ ನೆಲೆಸಲು ಮನೆ ಇಲ್ಲದಂತಾಗಿದೆ. ಸಹೋದರನ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.
ಘಟನೆಯ ಕುರಿತಂತೆ ತಹಶೀಲ್ದಾರ್, ವಿಎ, ಪಿಡಿಒ ಅವರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಮಲವಂತಿಗೆ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಜೈನ್, ಕಳಸ ಮೆಸ್ಕಾಂ ಉಪ ವಿಭಾಗದ ಎಇ ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.


