ಬೆಳ್ತಂಗಡಿ : ಲಾಡ್ಜ್ ನಲ್ಲಿ ರೂಂ ಮಾಡಿದ್ದ ದಂಪತಿ ಕಳೆದುಕೊಂಡಿದ್ದ ಚಿನ್ನವನ್ನು ಲಾಡ್ಜ್ ಸಿಬ್ಬಂದಿ ಹುಡುಕಿ ಮತ್ತೆ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯಲ್ಲಿರುವ ಅಖಿಲ್ ಶೆಟ್ಟಿ ಮಾಲೀಕತ್ವದ ಪಾರಿಜಾತ ಇನ್ ಹೆಸರಿನ ಲಾಡ್ಜ್ ಗೆ ಸೆ.29 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯಕ್ಕೆ ಹೋಗಲು ಆಂಧ್ರಪ್ರದೇಶ ಮೂಲದ ಶಿವಕುಮಾರ್ ಮತ್ತು ಅವರ ಪತ್ನಿ ರೂಂ ಮಾಡಿದ್ದರು. ಆದ್ರೆ ಸೆ.30 ರಂದು ರೂಂ ಚೆಕ್ ಓಟ್ ಮಾಡುವಾಗ ಪತ್ನಿಯ 20 ಗ್ರಾಂ ತೂಕದ ಚಿನ್ನವನ್ನು ರೂಂ ನಲ್ಲಿ ಕಳೆದುಕೊಂಡಿದ್ದಾರೆ. ಯಾವ ಕಡೆ ಹುಡುಕಾಟ ನಡೆಸಿದ್ರೂ ಚಿನ್ನ ಪತ್ತೆಯಾಗಿರಲಿಲ್ಲ ಕೊನೆಗೆ ಚಿನ್ನವನ್ನು ಹುಡುಕಿ ವಾಪಸ್ ಕೊಡುವ ಜವಾಬ್ದಾರಿ ನಮ್ಮದು ಎಂದು ಲಾಡ್ಜ್ ಮಾಲೀಕ ಅಖಿಲ್ ಶೆಟ್ಟಿ ದಂಪತಿಗೆ ಭರವಸೆ ನೀಡಿ ಕಳುಹಿಸಿದ್ದರು.
ದಂಪತಿ ತಂಗಿದ್ದ ರೂಂನಲ್ಲಿ ಸಿಬ್ಬಂದಿ ಎಲ್ಲಾ ಕಡೆ ಹುಡುಕಾಟ ಮಾಡಿದ್ದರೂ ಪತ್ತೆಯಾಗದಿದ್ದಾಗ ಕೊನೆಗೆ ಯಾರಿಗೂ ರೂಂ ನೀಡದೆ ಲಾಕ್ ಮಾಡಿ ಇಟ್ಟಿದ್ದರು. ದಂಪತಿ ಉಪಯೋಗಿಸಿದ್ದ ಬೆಡ್ ಶೀಟ್ ಮತ್ತು ದಿಂಬು ಕವರ್ ಗಳನ್ನು ವಾಶ್ ಮಾಡಲು ಕಳುಹಿಸಿದ್ದರು. ಅ.1 ರಂದು ವಾಶ್ ಮಾಡಲು ಕಳುಹಿಸಿದ್ದ ದಿಂಬು ಕವರ್ ಒಳಗೆ ಚಿನ್ನ ಇರುವುದನ್ನು ಸಿಬ್ಬಂದಿ ಪತ್ತೆ ಮಾಡಿದ್ದಾರೆ. ತಕ್ಷಣ ಕರೆಮಾಡಿ ದಂಪತಿಯನ್ನು ಲಾಡ್ಜ್ ಗೆ ಕರೆಸಿ ವಿಚಾರ ಹೇಳಿದಾಗ ರಾತ್ರಿ ಮಲಗುವಾಗ ಚಿನ್ನವನ್ನು ದಿಂಬು ಪಕ್ಕ ಇಟ್ಟಿದ್ದು ಅದು ದಿಂಬು ಕವರ್ ಒಳಗಡೆ ಸೇರಿದೆ ಎನ್ನಲಾಗಿದೆ.

ಕೊನೆಗೂ ಸುಮಾರು 2 ಲಕ್ಷ ಮೌಲ್ಯದ 20 ಗ್ರಾಂ ಚಿನ್ನವನ್ನು ಕಳೆದುಕೊಂಡಿದ್ದ ಆಂದ್ರಪ್ರದೇಶದ ದಂಪತಿಗೆ ಚಿನ್ನವನ್ನು ಮರಳಿ ಹಸ್ತಾಂತರಿಸಿ ಪಾರಿಜಾತ ಇನ್ ಲಾಡ್ಜ್ ಮಾಲೀಕ ಅಖಿಲ್ ಶೆಟ್ಟಿ ಮತ್ತು ವೀಕ್ಷಿತ್ ಶೆಟ್ಟಿ ಪ್ರಾಮಾಣಿಕತೆ ಮೆರೆದಿದ್ದಾರೆ.


