ಭೋಪಾಲ್: ಇಲ್ಲೊಬ್ಬ ಯುವಕ ತನ್ನ ಪ್ರಿಯತಮೆಯನ್ನು ಭೇಟಿ ಆಗಲು ಹೋಗಿ ಇಕ್ಕಟ್ಟಿಗೆ ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಯುವಕನೊಬ್ಬ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಭೇಟಿ ಆಗಲು ಇಚ್ಛಿಸಿದ್ದ. ಆದರೆ ಆತ ಮನೆಯವರ ಕಣ್ಣು ತಪ್ಪಿಸಿ ಯುವತಿಯ ಮನೆಗೆ ಹೋಗಿ ಆಕೆಯನ್ನು ಭೇಟಿ ಆಗುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಯುವಕ ತನ್ನ ಪ್ರಿಯತಮೆ ಬಳಿ ಹೇಳಿ ಒಂದು ಪ್ಲ್ಯಾನ್ ಮಾಡಿದ್ದಾನೆ. ಹೆಣ್ಣಿನ ವೇಷ ಧರಿಸಿ, ಸಲ್ವಾರ್ ಸೂಟು, ಬಳೆ, ಮತ್ತು ಬಿಂದಿ ಹಾಕಿಕೊಂಡು ಸ್ಕೂಟಿಯಲ್ಲಿ ಪ್ರಿಯತಮೆಯ ಮನೆಗೆ ತೆರಳಿದ್ದಾನೆ. ಆದರೆ ಮನೆಯಿಂದ ವಾಪಾಸ್ ಆಗುವ ವೇಳೆ ಸ್ಥಳೀಯರು ಯುವಕನ ನಡಿಗೆ ನೋಡಿ ಸಂಶಯಪಟ್ಟಿದ್ದಾರೆ.
ಹೆಣ್ಣಿನ ವೇಷ ಧರಿಸಿಕೊಂಡು ಬಂದಿದ್ದ ಯುವಕನನ್ನು ವಿಚಾರಿಸಿದಾಗ, ಸ್ಥಳೀಯರು ಆತ ಹಾಕಿದ್ದ ಸ್ಕಾರ್ಫ್ ತೆಗೆದು ನಿಜಮುಖ ಬಯಲು ಮಾಡಿ ಥಳಿಸಿದ್ದಾರೆ. ಯುವಕ ಸಿಕ್ಕಿಬಿದ್ದ ತಕ್ಷಣ ಸ್ಥಳದಲ್ಲಿ ಕೋಲಾಹಲ ಉಂಟಾಗಿದೆ. ಜೊತೆಗೆ ಪ್ರಿಯಕರನಿಗೆ ಥಳಿಸುತ್ತಿರುವುದನ್ನು ನೋಡಿದ ಗೆಳತಿ ಕೂಡ ಮನೆಯಿಂದ ಹೊರಗೆ ಓಡಿ ಬಂದು ನಿಜ ಸಂಗತಿಯನ್ನು ಹೇಳಿ ಜನರಿಂದ ಪ್ರೇಮಿಯನ್ನು ರಕ್ಷಿಸಿದ್ದಾಳೆ. ಹುಡುಗಿಯ ಮಾತು ಕೇಳಿ ಜನರ ಸಿಟ್ಟು ತಗ್ಗಿ ಇಬ್ಬರಿಗೂ ಸಲಹೆ ಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.