ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಗೆ ಹೈಕೋರ್ಟ್ ಎರಡು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಸೆಪ್ಟೆಂಬರ್ 13 ರಂದು ಚಿತ್ರದುರ್ಗದಲ್ಲಿ ನಡೆದಿದ್ದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಜಿಲ್ಲೆ ಪ್ರವೇಶಿಸದಂತೆ ಚಿತ್ರದುರ್ಗ ಜಿಲ್ಲಾಡಳಿತ ಶರಣ್ ಪಂಪ್ ವೆಲ್ ಗೆ ನಿರ್ಬಂಧ ವಿಧಿಸಿತ್ತು. ಜಿಲ್ಲಾಡಳಿತದ ನಿರ್ಬಂಧವನ್ನು ಪ್ರಶ್ನಿಸಿ ಶರಣ್ ಪಂಪ್ ವೆಲ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೆಲವು ಷರತ್ತುಗಳನ್ನು ವಿಧಿಸಿ ಚಿತ್ರದುರ್ಗ ಜಿಲ್ಲಾಡಳಿತದ ನಿರ್ಬಂಧವನ್ನು ತೆರವುಗೊಳಿಸಿದ್ದ ಹೈಕೋರ್ಟ್, ಸೆಪ್ಟೆಂಬರ್ 13 ರಂದು ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ದರ್ಶನಕ್ಕೆ ಅವಕಾಶ ನೀಡಿತ್ತು.
ಅದರಂತೆ ಸೆಪ್ಟೆಂಬರ್ 13 ರಂದು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದ ಶರಣ್ ಪಂಪ್ ವೆಲ್ ಮಧ್ಯಾಹ್ನ 12.30ರ ಬದಲು 12.45 ರವರೆಗೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಆದೇಶ ಉಲ್ಲಂಘನೆ ಬಗ್ಗೆ ಪೊಲೀಸರು ಹೈಕೋರ್ಟ್ ಗಮನಕ್ಕೆ ತಂದಿದ್ದ ಕಾರಣ ದಂಡ ವಿಧಿಸಿರುವ ಕೋರ್ಟ್, ರಾಜ್ಯ ಲೀಗಲ್ ಸರ್ವೀಸ್ ಅಥಾರಿಟಿಗೆ 1 ಲಕ್ಷ ರೂಪಾಯಿ ಮತ್ತು ಪೊಲೀಸ್ ಕ್ಷೇಮಾಭಿವೃದ್ಧಿ ನಿಧಿಗೆ 1 ಲಕ್ಷ ರೂಪಾಯಿ ನೀಡುವಂತೆ ಆದೇಶಿಸಿದೆ.


