ಕೊರೊನಾ ವೈರಸ್ ನಿರ್ಮೂಲನೆಯಾದ ನಂತರ ಪಂಜಾಬ್‌ಗೆ ಹಿಂದಿರುಗಿ ಕೃಷಿಕನಾಗುತ್ತೇನೆ ಎಂದು ಭಾರತದ ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಬಹಿರಂಗಪಡಿಸಿದ್ದಾರೆ.
ಟೀಮ್ ಇಂಡಿಯಾ ಆಟಗಾರ ಆರ್. ಅಶ್ವಿನ್ ಅವರೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಲೈವ್ ಸಂದರ್ಶನದಲ್ಲಿ ಹರ್ಭಜನ್ ಸಿಂಗ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 39 ವರ್ಷದ ಹರ್ಭಜನ್ ಅವರು ಹೇಗೆ ಕೃಷಿ ಮಾಡುತ್ತೇನೆ ಮತ್ತು ಅಗತ್ಯವಿರುವ ಜನರಿಗೆ ಆಹಾರವನ್ನು ಹೇಗೆ ವಿತರಿಸುತ್ತೇನೆ ಎಂಬುದನ್ನು ಹೇಳಿದ್ದಾರೆ.
ಈ ಬಿಕ್ಕಟ್ಟಿನಿಂದ ದೇಶ ಹೇಗೆ ಹೊರಬರುತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಬಜ್ಜಿ, ಇದೆಲ್ಲವೂ ನಡೆಯುತ್ತಿದೆ. ನಾವು ಇನ್ನೂ ಕೆಲವು ವಿಷಯಗಳನ್ನು ಕಲಿಯಬೇಕೆಂದು ದೇವರು ಬಯಸುತ್ತಾನೆ ಎಂದಿದ್ದಾರೆ. ನಾನು ಪ್ರಯಾಣ ಮಾಡುತ್ತಿದ್ದೆ. ಮನೆಯಲ್ಲಿ ಪೂರ್ಣ ಸಮಯ ಕಳೆಯಲು ಸಾಧ್ಯವಿರಲಿಲ್ಲ. ನಾವೆಲ್ಲ ಹಣದ ಹಿಂದೆ ಓಡುತ್ತಿದ್ದೇವೆ ಎಂದು ಹರ್ಭಜನ್ ಹೇಳಿದರು.
ದೇವರು ನಮ್ಮನ್ನು ನಾವು ನೋಡಿಕೊಳ್ಳಲು ಅವಕಾಶ ನೀಡಿದ್ದಾರೆ. ಜೀವನದಲ್ಲಿ ಯಾವುದು ಮುಖ್ಯ ಎಂಬುದನ್ನು ಈ ಮೂಲಕ ತಿಳಿಸಿಕೊಡುತ್ತಿದ್ದಾನೆ. ಕೇವಲ ಹಣ ಸಂಪಾದನೆ ನಮ್ಮ ಗುರಿಯಲ್ಲವೆಂದು ಬಜ್ಜಿ ಹೇಳಿದ್ದಾರೆ. ಕೊರೊನಾ ಮುಗಿದ ಮೇಲೆ ಪಂಜಾಬ್ ಗೆ ಹೋಗಿ ಹೆಚ್ಚಿನ ಜಮೀನು ಖರೀದಿಸಿ ಬೆಳೆ ಬೆಳೆಯುತ್ತೇನೆ. ಅಗತ್ಯವಿರುವ ಜನರಿಗೆ ಹಣ ಪಡೆಯದೆ ಹಂಚುತ್ತೇನೆ ಎಂದಿದ್ದಾರೆ.