ಬೆಳ್ತಂಗಡಿ: ವ್ಯಕ್ತಿಯೋರ್ವ ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಬಂದು,ಆಕೆಯಲ್ಲಿ ದೂರವಾಣಿ ಸಂಖ್ಯೆ ಕೇಳುವ ಮೂಲಕ ಆಕೆಗೆ ಕಿರುಕುಳ ನೀಡಿದ ಬಗ್ಗೆ ವೇಣೂರು ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಆರೋಪಿ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ನಿವಾಸಿ, ಹುಲ್ಲು ಕಟಾವು ಯಂತ್ರದ ಮೆಕ್ಯಾನಿಕ್ ಆಗಿರುವ ಜುಮಾರ್ (24) ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಈ ಘಟನೆಯು ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಪುಲ್ಲಾಯಿಯಲ್ಲಿ ನಡೆದಿದ್ದು, ಆರೋಪಿ ಜುಮಾರ್ ತನ್ನ ಸಂಬಂಧಿ ಬಾಲಕಿ ಹಾಗೂ ನೆರೆಯ ವಿದ್ಯಾರ್ಥಿನಿಯೊಂದಿಗೆ ಕಾಲೇಜಿಗೆ ಹೋಗುತ್ತಿರುವ ವೇಳೆಗೆ ಕಳೆದ ಐದು ದಿನಗಳಿಂದ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದ. ಅಷ್ಟೇಅಲ್ಲದೆ ಬೈಕ್ ನಿಲ್ಲಿಸಿ ಬೈಕ್‌ನಲ್ಲಿ ಬರುತ್ತೀರಾ, ನಿಮ್ಮ ಫೋನ್ ನಂಬರ್ ಕೊಡಿ ಎಂದು ಕೇಳುತ್ತಿದ್ದ. ಹಾಗೆಯೇ ಅ. 15ರಂದು ಬೆಳಗ್ಗೆ 7.45 ಗಂಟೆಗೆ ಎಂದಿನಂತೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಅತ ಬೈಕ್ ಅನ್ನು ಚಲಾಯಿಸಿಕೊಂಡು ಮುಂದಕ್ಕೆ ಹೋಗಿ ವಾಪಸು ಹಿಂದಕ್ಕೆ ತಿರುಗಿಸಿಕೊಂಡು ಬಂದು ವಿದ್ಯಾರ್ಥಿನಿಗೆ ತೊಂದರೆ ನೀಡಿದ್ದಾಗಿ ಆರೋಪಿಸಲಾಗಿದೆ.
ವೇಣೂರು ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


