Wednesday, May 15, 2024
Homeಕರಾವಳಿಉಡುಪಿಕುಂದಾಪುರದಲ್ಲಿ ಶಾಸನೋಕ್ತ ಉಭಯಮುಖಿ ದಾನ ಶಿಲೆಗಳ ಪತ್ತೆ!

ಕುಂದಾಪುರದಲ್ಲಿ ಶಾಸನೋಕ್ತ ಉಭಯಮುಖಿ ದಾನ ಶಿಲೆಗಳ ಪತ್ತೆ!

spot_img
- Advertisement -
- Advertisement -

ಉಡುಪಿ:ಇತಿಹಾಸ ಮತ್ತು ಪುರಾತತ್ವ ಸಂಶೋಧಕ ನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಹಾಗೂ ರಾಜೇಶ್ವರ ಉಪಾಧ್ಯಾಯ ಕಂಚಾರ್ತಿ ಅವರು ಜಿಲ್ಲೆಯ ಕುಂದಾಪುರ ತಾಲೂಕಿನ ಕೈಲ್ಕೆರೆ, ಗುಡ್ಡೆಟ್ಟು, ಹಾರ್ಯಾಡಿ ಮತ್ತು ಕೊಳನ್ಕಲ್ಲು ಪ್ರದೇಶದಲ್ಲಿ ಒಟ್ಟು 5 ಶಾಸನೋಕ್ತ ಉಭಯಮುಖಿ ದಾನ ಶಿಲೆಗಳನ್ನು ಪತ್ತೆ ಮಾಡಿದ್ದಾರೆ.

ಇಲ್ಲಿ ಪತ್ತೆಯಾಗಿರುವ ಎಲ್ಲಾ ದಾನ ಶಿಲೆಗಳಲ್ಲಿ ಶಾಸನಗಳಿದ್ದು,ಕೆಲವು ಕಡೆ ಅಳಿಸಿಹೋಗಿವೆ. ಗೋಚರಿಸುವ ಕೆಲವು ಲಿಪಿಯ ಆಧಾರದ ಮೇಲೆ ಇವುಗಳು 14ನೇ ಶತಮಾನಕ್ಕೆ ಸೇರಿದ ಶಾಸನಗಳೆಂದು ಅಂದಾಜಿಸಬಹುದಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಉಭಯಮುಖಿ ದಾನ ಶಿಲೆಗಳು ಕರ್ನಾಟಕದಲ್ಲಿ ಪತ್ತೆಯಾಗಿರುವುದು ತೀರಾ ವಿರಳ. ಕಂಚಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಬಳಿ, ಕೊಳನ್ಕಲ್ಲು ಶ್ರೀ ಮಹಾಗಣಪತಿ ದೇವಾಲಯ ಸಮೀಪದ ಗದ್ದೆಯ ಬಳಿ, ಹಾರ್ಯಾಡಿ ಪುರಾಣಿಕರ ಮನೆಯ ಬಳಿ ಪತ್ತೆ ಮಾಡಲಾದ ದಾನ ಶಿಲೆಯ ಕೆಳಗಿನ ಪಟ್ಟಿಕೆಯು ಗುಡ್ಡೆಟ್ಟು ದೇವಾಲಯದ ಬಳಿಯಿರುವ ಪಟ್ಟಿಕೆಯ ರೀತಿಯಲ್ಲಿಯೇ ಇದ್ದು ಮೇಲ್ಭಾಗದಲ್ಲಿ ಮಾತ್ರ ಶಿವಲಿಂಗ ಹಾಗೂ ಇಕ್ಕೆಲಗಳಲ್ಲಿ ಕಾಲುದೀಪದ ಕೆತ್ತನೆಯಿದೆ.

ಗೋದಾನಗಳಲ್ಲಿಯೇ ಶ್ರೇಷ್ಠ ದಾನವಾಗಿರುವ ಉಭಯಮುಖಿ ದಾನ (ಗರ್ಭಧಾರಣೆಯಾಗಿರುವ ಹಸುವನ್ನು ಅಥವಾ ಹಸುವಿನ ಹಾಲುಣ್ಣುತ್ತಿರುವ ಕರುವನ್ನು ದಾನ ಮಾಡುವುದು)ವನ್ನು ದೇವಾಲಯ ಅಥವಾ ಬ್ರಾಹ್ಮಣರಿಗೆ ನೀಡಲಾಗುತ್ತಿತ್ತು.

ಗುಡ್ಡೆಟ್ಟು ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಪತ್ತೆಮಾಡಿದ ಉಭಯಮುಖಿ ದಾನ ಶಿಲೆಯ ಮೇಲ್ಭಾಗದಲ್ಲಿ ಪೀಠದ ಮೇಲೆ ಪದ್ಮಾಸನದಲ್ಲಿ ಕುಳಿತಿರುವ ಚತುರ್ಭುಜಧಾರಿ ವಿಷ್ಣು ಹಾಗೂ ಇಕ್ಕೆಲದಲ್ಲಿ ಕಾಲುದೀಪ ಹಾಗೂ ಕುಳಿತಿರುವ ಗರುಡನ‌ ಕೆತ್ತನೆಯಿದೆ. ಕೆಳಗಿನ ‌ಪಟ್ಟಿಕೆಯಲ್ಲಿ ದನ‌, ಹಾಲುಣ್ಣುತ್ತಿರುವ ಕರು ಹಾಗೂ ದಾನವನ್ನು ಸ್ವೀಕರಿಸುವ ಅಥವಾ ಕೊಡುತ್ತಿರುವ ವ್ಯಕ್ತಿಯ ‌ಉಬ್ಬು‌ ಶಿಲ್ಪವಿದೆ.

ಇತರೆಡೆ ಪತ್ತೆಯಾದ ಕೆಲವು ಶಾಸನಗಳ ಶಾಪಾಶಯದಲ್ಲಿ ‘ಉಭಯಮುಖಿಂ ಕೊಂದ ಪಾಪಂಮಕ್ಕುಂ’ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಪತ್ತೆಯಾದ ಅಪರೂಪದ ಈ ಉಭಯಮುಖಿ ದಾನ ಶಿಲೆಗಳು ಅಧ್ಯಯನ ದೃಷ್ಟಿಯಿಂದ ಇತಿಹಾಸಕ್ಕೆ ಹೊಸ ಬೆಳಕನ್ನು ಚೆಲ್ಲಲಿದೆ ಎಂದು ಸಂಶೋಧನಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಷೇತ್ರಕಾರ್ಯ ಶೋಧನೆಯ ಸಂದರ್ಭದಲ್ಲಿ ಗುಡ್ಡೆಟ್ಟಿನ ಬಾಲಚಂದ್ರ ಅಡಿಗ ಸಹಕಾರ ನೀಡಿದ್ದಾರೆ ಎಂದ ತಿಳಿಸಿದ್ದಾರೆ

- Advertisement -
spot_img

Latest News

error: Content is protected !!