ಬೆಂಗಳೂರು: ಖ್ಯಾತ ಶಿಕ್ಷಣ ತಜ್ಞ, ಪಿಇಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ವಿಧಾನಪರಿಷತ್ತಿನ ಮಾಜಿ ಸದಸ್ಯ ಡಾ.ಎಂ.ಆರ್.ದೊರೆಸ್ವಾಮಿ ಅವರು ತಮ್ಮ 88ನೇ ವರ್ಷದಲ್ಲಿ ವಯೋಸಹಜ ಕಾಯಿಲೆಯಿಂದ ಗುರುವಾರದಂದು ತಮ್ಮ ಬೆಂಗಳೂರಿನ ಬನಶಂಕರಿ ನಿವಾಸದಲ್ಲಿ ನಿಧನರಾಗಿದ್ದಾರೆ.
ಇವರು ಪತ್ನಿ ರಾಧಾ ಮನೋಹರಿ, ಪುತ್ರ ಪ್ರೊ.ಡಿ.ಜವಾಹರ್, ಸೊಸೆ ಸುಮನ್ ಜವಾಹರ್, ಮಗಳು ಡಾ.ಡಿ.ರೂಪ ಮತ್ತು ಅಳಿಯ ಡಾ. ಸುರೇಶ್ ಕೃಷ್ಣ ಅವರನ್ನು ಅಗಲಿದ್ದಾರೆ.
ಬೆಂಗಳೂರಿನ ಬನಶಂಕರಿ ನಿವಾಸಿಯಾಗಿದ್ದ ದೊರೆಸ್ವಾಮಿ ಅವರು ಬೆಂಗಳೂರಿನಲ್ಲಿ 1972ರಲ್ಲಿ ಬಾಡಿಗೆ ಕಟ್ಟಡದಲ್ಲಿ ಪಿಇಎಸ್ ಶಿಕ್ಷಣ ಸಂಸ್ಥೆ ಆರಂಭಿಸಿದ್ದು, ಇವರ ಶಿಕ್ಷಣ ಸಂಸ್ಥೆಗಳು ಕರ್ನಾಟಕವಲ್ಲದೆ, ಆಂಧ್ರ ಪ್ರದೇಶಗಳಲ್ಲೂ ವಿಸ್ತರಣೆಯಾಗಿದೆ.
ದೊರೆಸ್ವಾಮಿ ಅವರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಅವರ ಬನಶಂಕರಿ ನಿವಾಸಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಶಾಸಕ ಕೃಷ್ಣಪ್ಪ ಅವರು ತೆರಳಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿವಿಧ ಸಚಿವರು, ಶಾಸಕರು, ಹಲವು ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.