ಬೆಳ್ತಂಗಡಿ: ಕೂಲಿ ಕೆಲಸವಿಲ್ಲದೆ ಆಹಾರಕ್ಕಾಗಿ ಸಂಕಷ್ಟಕ್ಕೊಳಗಾದ ತಾಲೂಕಿನ ಬಡ ಕುಟುಂಬಗಳಿಗೆ ನೆರವಾಗುವಂತೆ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಸಹಯೋಗದಲ್ಲಿ ರೋಟರಿ ಸದಸ್ಯರಾದ ಡಾ. ಶಶಿಧರ್ ಡೋಂಗ್ರೆ, ಡಾ. ಸುಶ್ಮಾ ಡೋಂಗ್ರೆ 15 ಕ್ವಿಂಟಾಲ್ ಅಕ್ಕಿಯನ್ನು ನೀಡಲು ಮುಂದಾಗಿದ್ದು, ಇಂದು ಶಾಸಕ ಹರೀಶ್ ಪೂಂಜ ಉಪಸ್ಥಿತಿಯಲ್ಲಿ ಸಾಂಕೇತಿಕವಾಗಿ ಬಡ ಕುಟುಂಬಗಳಿಗೆ ಹಸ್ತಾಂತರಿಸಿದರು.
ಅಳದಂಗಡಿ ವ್ಯಾಪ್ತಿಯ ಪಿಲ್ಯ, ಬಡಗ ಕಾರಂದೂರು, ಬಳೆಂಜ, ನಾಲ್ಕೂರು ಮುಂತಾದ ಗ್ರಾಮಗಳ ಬಡ ಕುಟುಂಬಗಳಿಗೆ ಈ ನೆರವನ್ನು ಒದಗಿಸಿದ್ದಾರೆ. ದಾನಿಗಳಾದ ಡಾ.ಶಶಿಧರ್ ಡೋಂಗ್ರೆ ಮಾತನಾಡಿ, ತಾಲೂಕಿನ ದಿನ ಕೂಲಿ ಕಾರ್ಮಿಕರು ಕೊರೋನಾ ಲಾಕ್ ಡೌನ್ ನಿಂದಾಗಿ ಸರಿಯಾದ ಕೆಲಸವಿಲ್ಲದೇ ಆರ್ಥಿಕವಾಗಿ ಸಂಕಷ್ಟಕ್ಕೊಳಗಾದ ಆಯ್ದ ಬಡ ಕುಟುಂಬಗಳಿಗೆ ಅಕ್ಕಿಯನ್ನು ನೀಡಲಾಗುತ್ತಿದ್ದು ಇವರ ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಗ್ರಾಮ ವ್ಯಾಪ್ತಿಯ ತಂಡದ ಸದಸ್ಯರು ಸೇರಿ ಮನೆ ಮನೆಗೆ ತಲುಪಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಜಯರಾಮ್ ಎಸ್., ಸದಸ್ಯರಾದ ಚಂದ್ರಕಾಂತ್ ಕಾಮತ್, ಶ್ರೀಕಾಂತ್ ಕಾಮತ್, ಧನಂಜಯ ರಾವ್, ಡಾ.ಸುಶ್ಮಾ ಡೋಂಗ್ರೆ, ಟೈಲರ್ ರಮೇಶ್ ಬಂಗೇರ ಉಪಸ್ಥಿತರಿದ್ದರು.