ಉಡುಪಿ: ಸ್ವಂತ ಮನೆ ಕಟ್ಟುವವರಿಗೆ ಬಿಪಿಎಲ್ ಕಾರ್ಡ್ ಅವಶ್ಯಕತೆ ಇಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ಉಡುಪಿಯಲ್ಲಿ ಬಿಪಿಎಲ್ ಕಾರ್ಡ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಆಹಾರ ಸಚಿವರು, ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿದ್ದು,
ಅನರ್ಹರನ್ನು ಬಿಪಿಎಲ್ ನಿಂದ ಎಪಿಎಲ್ ಗೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಮಾನದಂಡ ಬಿಟ್ಟು ಪರಿಷ್ಕರಣೆ ಮಾಡುವುದಿಲ್ಲ ಎಂದು ಹೇಳಿರುವ ಸಚಿವ ಕೆ.ಹೆಚ್. ಮುನಿಯಪ್ಪ, ಯಾವುದೇ ಕಾರಣಕ್ಕೂ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಏಳು ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಇದೆ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಅನರ್ಹರು ಸ್ವಯಂ ಪ್ರೇರಿತವಾಗಿ ಬಿಪಿಎಲ್ ಕಾರ್ಡ್ ತ್ಯಜಿಸಿ ಹೊಸ ಪಡಿತರ ಚೀಟಿದಾರರಿಗೆ ಅವಕಾಶ ಮಾಡಿಕೊಡಿ ಎಂದು ಆಹಾರ ಸಚಿವರು ಮನವಿ ಮಾಡಿದ್ದಾರೆ.
ಸದ್ಯ ರಾಜ್ಯದಲ್ಲಿ 75% ಜನರು ಬಿಪಿಎಲ್ ಕಾರ್ಡ್ ವ್ಯಾಪ್ತಿಗೆ ಒಳಪಡುತ್ತಿದ್ದು, 1.28 ಕೋಟಿ ಬಿಪಿಎಲ್ ಕಾರ್ಡ್ ಗಳಲ್ಲಿ 4.50 ಕೋಟಿ ಜನ ಫಲಾನುಭವಿಗಳಿದ್ದಾರೆ ಎಂದು ಸಚಿವ ಮುನಿಯಪ್ಪ ಮಾಹಿತಿ ನೀಡಿದ್ದಾರೆ.


