
ಮಂಗಳೂರು: ಮೀನುಗಳ ಸಂತಾನೋತ್ಪತ್ತಿ ಅವಧಿಯ ಎರಡು ತಿಂಗಳ ಮಳೆಗಾಲದ ನಿಷೇಧದ ಬಳಿಕ, ಆಗಸ್ಟ್ 1ರಿಂದ ಮಂಗಳೂರು ಮತ್ತು ಮಲ್ಪೆಯಲ್ಲಿ ಮತ್ತೆ ಮೀನುಗಾರಿಕೆ ಚಟುವಟಿಕೆಗಳು ಆರಂಭಗೊಳ್ಳುತ್ತಿವೆ.
ಕಳೆದ ಒಂದು ವಾರದಿಂದಲೇ ಬೋಟ್‌ಗಳ ದುರಸ್ತಿ ಹಾಗೂ ಐಸ್ ತುಂಬಿಸುವ ಸಿದ್ಧತೆಗಳು ಪೂರ್ಣಗೊಂಡಿದ್ದು, ಮೊದಲ ದಿನವೇ ಸುಮಾರು 70 ರಿಂದ 100 ಬೋಟ್‌ಗಳು ಸಮುದ್ರಕ್ಕೆ ತೆರಳಲಿವೆ ಎಂದು ದಕ್ಷಿಣ ಕನ್ನಡ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ದಿಲೀಪ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುಮಾರು 400 ಆಳಸಮುದ್ರ ಟ್ರಾಲಿಂಗ್ ಬೋಟ್‌ಗಳು ಸಿದ್ಧವಾಗಿದ್ದರೂ, ಸಮುದ್ರದಲ್ಲಿ ಗಾಳಿ ಮತ್ತು ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಹವಾಮಾನ ವೈಪರೀತ್ಯ ಅಡ್ಡಿಯಾಗುವ ಆತಂಕವಿದೆ ಎಂದು ಮೀನುಗಾರ ಮುಖಂಡ ಮೋಹನ್ ಬೆಂಗ್ರೆ ಹೇಳಿದ್ದಾರೆ. ಇನ್ನು ಪರ್ಸಿನ್ ಬೋಟ್ ಮೀನುಗಾರಿಕೆಯು ಸಮುದ್ರ ಪೂಜೆಯ ನಂತರ ಆಗಸ್ಟ್ 7ರಿಂದ ಆರಂಭವಾಗಲಿದ್ದು, ಇದು ಹವಾಮಾನದ ಪರಿಸ್ಥಿತಿಯನ್ನು ಆಧರಿಸಿರಲಿದೆ. ಅದೇ ರೀತಿ ಮಲ್ಪೆಯಲ್ಲೂ ಬಂದರು ಸ್ವಚ್ಛತೆ ಸೇರಿದಂತೆ ಪೂರ್ವಭಾವಿ ಸಿದ್ಧತೆಗಳು ಮುಗಿದಿದ್ದು, ಹಂತ ಹಂತವಾಗಿ ದೋಣಿಗಳು ಮೀನುಗಾರಿಕೆಗೆ ಸಮುದ್ರಕ್ಕಿಳಿಯಲಿವೆ.


