ಮಂಗಳೂರು: ಉಳ್ಳಾಲದ ಕೋಟೆಪುರದ ಫಿಶ್ ಮೀಲ್ ಫ್ಯಾಕ್ಟರಿಯಿಂದ ಮಂಗಳೂರು ಬಂದರಿಗೆ ಮೀನಿನ ಎಣ್ಣೆಯನ್ನು ಹೊತ್ತೊಯ್ಯುತ್ತಿದ್ದ ಕ್ಯಾಂಟರ್ ವಾಹನವೊಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ, ಗುರುವಾರ ರಾತ್ರಿ ಅಬ್ಬಕ್ಕ ಸರ್ಕಲ್‌ನಿಂದ ಉಳ್ಳಾಲ ಬೈಲ್‌ವರೆಗಿನ ಮುಖ್ಯ ರಸ್ತೆಯಲ್ಲಿ ಭಾರೀ ಪ್ರಮಾಣದ ಮೀನಿನ ಎಣ್ಣೆ ಸೋರಿಕೆಯಾಗಿದೆ.
ರಸ್ತೆ ತುಂಬೆಲ್ಲಾ ಜಾರುವ ಎಣ್ಣೆ ಹರಿದ ಪರಿಣಾಮವಾಗಿ, ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಲವಾರು ದ್ವಿಚಕ್ರ ವಾಹನಗಳು ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ಸವಾರರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ತೀವ್ರ ಆಕ್ರೋಶಗೊಂಡ ಸ್ಥಳೀಯ ಸಾರ್ವಜನಿಕರು ಉಳ್ಳಾಲ ಬೈಲ್‌ನಲ್ಲಿ ಕ್ಯಾಂಟರ್ ವಾಹನವನ್ನು ತಡೆದು ಪ್ರತಿಭಟನೆ ನಡೆಸಿದರು.
ಈ ಅಪಘಾತದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಸ್ಪೀಕರ್ ಹಾಗೂ ಸ್ಥಳೀಯ ಶಾಸಕರಾದ ಯು.ಟಿ. ಖಾದರ್ ಅವರು, ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.
ಜೊತೆಗೆ, ಅಪಘಾತದಿಂದ ಗಾಯಗೊಂಡ ದ್ವಿಚಕ್ರ ವಾಹನ ಸವಾರರಿಗೆ ಸಂಬಂಧಪಟ್ಟ ಫಿಶ್‌ಮಿಲ್ ಸಂಸ್ಥೆಯವರೇ ಸೂಕ್ತ ಪರಿಹಾರ ನೀಡಬೇಕೆಂದು ಅವರು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.


