ಧಾರವಾಡ: ಇಮೇಲ್ ಮೂಲಕ ಇಂದು ಮುಂಜಾನೆ ಹುಸಿ ಬಾಂಬ್ ಬೆದರಿಕೆಯ ಸಂದೇಶವು ಧಾರವಾಡ ಹೈಕೋರ್ಟ್ ಪೀಠಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಧಾರವಾಡ ಹೈಕೋರ್ಟ್ ಪೀಠಕ್ಕೆ ಇಂದು ಮುಂಜಾನೆ ಬಂದಿರುವ ಇ ಮೇಲ್ ಮಧ್ಯಾಹ್ನ 1-15ಕ್ಕೆ ಬಾಂಬ್ ಸ್ಫೋಟಿಸುವುದಾಗಿ ಹೇಳಲಾಗಿದ್ದು, ಸ್ಥಳಕ್ಕೆ ಗರಗ ಪೊಲೀಸ್ ಠಾಣೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಪರಿಶೀಲನೆ ನಡೆಸಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದು, ಕೋರ್ಟ್ ಕಟ್ಟಡವನ್ನು ಹಾಗೂ ಆವರಣದ ಸುತ್ತಲು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಮತ್ತೆ ಕೋರ್ಟ್ ಕಲಾಪ ಆರಂಭವಾಗಿದೆ ಎನ್ನಲಾಗಿದೆ.
ಕೋರ್ಟ್ ಆವರಣದಲ್ಲಿದ್ದ ಕಕ್ಷಿಗಾರರು, ವಕೀಲರನ್ನು ಹೈಕೋರ್ಟ್ನಿಂದ ಹೊರಗಡೆ ಕಳುಹಿಸಿ ತಪಾಸಣೆ ನಡೆಸಿದರು. ಪೊಲೀಸರ ತನಿಖೆಯ ಬಳಿಕ ಇದೀಗ ಅದು ಸುಳ್ಳು ಬಾಂಬ್ ಬೆದರಿಕೆ ಎನ್ನುವುದು ಗೊತ್ತಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಎಂದಿನಂತೆ ಹೈಕೋರ್ಟ್ ಕಲಾಪ ಪುನರ್ ಆರಂಭವಾಗಿದೆ.


